ಕಲಬುರಗಿಜಿಲ್ಲಾಸುದ್ದಿ

ಒಳಮೀಸಲಾತಿ ವರದಿ ಅವೈಜ್ಞಾನಿಕ: ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಗುಲಬರ್ಗಾ ವಿವಿ ಬಲಗೈ ವಿದ್ಯಾರ್ಥಿ ಒಕ್ಕೂಟ

ಜಾರಿಯಲ್ಲಿರುವ ಮೀಸಲಾತಿ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತಕ್ಕೆ ಆಗ್ರಹ, ಹಳೆ ಜಾತಿ ಪ್ರಮಾಣ ಪತ್ರ ಮುಂದುವರಿಸಲು ಒತ್ತಾಯ

ಕಲಬುರಗಿ: ನ್ಯಾಯಮೂರ್ತಿ ಡಾ. ಎಚ್. ಎನ್. ನಾಗಮೋಹನ್ ದಾಸ್ ಸಲ್ಲಿಸಿರುವ ಒಳಮೀಸಲಾತಿ ಸಮೀಕ್ಷಾ ವರದಿ ಅವೈಜ್ಞಾನಿಕವಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಬಲಗೈ ಹೊಲೆಯ ಸಮುದಾಯ ವಿದ್ಯಾರ್ಥಿಗಳ ಒಕ್ಕೂಟವು ಖಂಡಿಸಿ, ಕುಲಪತಿಗಳ ಮುಖಾಂತರ ರಾಜ್ಯಪಾಲರಿಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.

ಪರಿಶಿಷ್ಟ ಜಾತಿಗಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಒಳಮೀಸಲಾತಿ ವರದಿ ಹಲವು ಗೊಂದಲಗಳಿಗೆ ಕಾರಣವಾಗಿದ್ದು, ಸಮಸ್ಯೆ ಪೂರ್ಣವಾಗಿ ಬಗೆಹರಿಯುವ ತನಕ ಪ್ರಸ್ತುತ ಜಾರಿಯಲ್ಲಿರುವ ಒಳ ಮೀಸಲಾತಿ ಕಾರ್ಯಚಟುವಟಿಕೆಗಳನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಹೊಸ ಜಾತಿ ಪ್ರಮಾಣ ಪತ್ರ ವಿತರಿಸುವುದನ್ನು ನಿಲ್ಲಿಸಿ, ಹಳೆ ಜಾತಿ ಪ್ರಮಾಣ ಪತ್ರವನ್ನೇ ಮಾನ್ಯಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.ಪರಿಶಿಷ್ಟ ಜಾತಿಯ 101 ಜಾತಿಗಳ ಕುರಿತು ಸಮಗ್ರ ಹಾಗೂ ವೈಜ್ಞಾನಿಕ ಅಧ್ಯಯನ ನಡೆದಿಲ್ಲ ಎಂದು ಆರೋಪಿಸಿರುವ ಒಕ್ಕೂಟ, ವಿಶೇಷವಾಗಿ ಬಲಗೈ ವರ್ಗದ 19 ಜಾತಿಗಳು ಹಾಗೂ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳಿಗೆ ಸಾಮಾಜಿಕ ಅನ್ಯಾಯವಾಗುತ್ತಿದೆ ಎಂದು ತಿಳಿಸಿದೆ.

ರೋಸ್ಟರ್ ಬಿಂದುಗಳ ಹಂಚಿಕೆ ವಿಧಾನವೂ ವೈಜ್ಞಾನಿಕ ಕ್ರಮವಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರದ 03-09-2025ರ ಆದೇಶದಲ್ಲಿ 17% ಮೀಸ ಲಾತಿಯನ್ನು ಲೆಕ್ಕಿಸುವಾಗ ರೋಸ್ಟರ್ ಬಿಂದುಗಳನ್ನು ತಪ್ಪಾಗಿ ನಿಗದಿಪಡಿಸಿರುವುದಾಗಿ ಹೇಳಲಾಗಿದೆ.

100ನ್ನು 17ರಿಂದ ಭಾಗಿಸಿದಾಗ 5.88 ಬಂದು 6ನೇ ಬಿಂದುವಿಗೆ ಮೀಸಲಾತಿ ನಿಗದಿಯಾಗಬೇಕು ಎಂಬ ಕ್ರಮ ಅನುಸರಿಸದೇ, 9ನೇ, 15ನೇ ಹಾಗೂ 23ನೇ ಬಿಂದು ಗಳನ್ನು ನಿಗದಿಪಡಿಸಿರುವುದು ಸರಿಯಲ್ಲ ಎಂದು ಆರೋಪಿಸಲಾಗಿದೆ.

ಹೀಗಾಗಿ ಆ ಆದೇಶವನ್ನು ಪರಿಷ್ಕರಿಸಿ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ.ಇದೇ ವೇಳೆ, ವರದಿ ಸಂಪೂರ್ಣ ಜಾರಿಯಾಗುವ ಮೊದಲು ನೀಡಿರುವ ಕೆಸೆಟ್ ಫಲಿತಾಂಶ ಹಾಗೂ ಹೊಸ ಜಾತಿ ಪ್ರಮಾಣ ಪತ್ರಗಳನ್ನು ಅಮಾನ್ಯಗೊಳಿಸಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆ, ವಸತಿ ಶಿಕ್ಷಣ ಸಂಸ್ಥೆಗಳ ಪ್ರವೇಶ, ಪಿಎಚ್‌ಡಿ ಪ್ರವೇಶ, ಕೃಷಿ ವಿಶ್ವವಿದ್ಯಾನಿಲಯ ನೇಮಕಾತಿ, ಆರೋಗ್ಯ ಇಲಾಖೆ, ಸಾರಿಗೆ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ನೇಮಕಾತಿ ಆದೇಶಗಳನ್ನು ಹಿಂಪಡೆದು ಹಳೆ ಮೀಸಲಾತಿ ಕ್ರಮ ಮುಂದುವರಿಸಬೇಕು ಎಂದು ಒತ್ತಾಯಿಸಲಾಗಿದೆ.

ಒಳಮೀಸಲಾತಿಯನ್ನು 6+6+5 ಮಾದರಿಯಲ್ಲಿ ವಿಭಾಗಿಸುವಾಗ ಮೂರು ಗುಂಪುಗಳಿಗೂ ಸಮಾನ ಆದ್ಯತೆ ನೀಡಬೇಕು. ಒಂದು ಪ್ರವರ್ಗದಲ್ಲಿ ಅಭ್ಯರ್ಥಿಗಳಿಲ್ಲದಿದ್ದರೆ ಮತ್ತೊಂದು ಪ್ರವರ್ಗಕ್ಕೆ ವರ್ಗಾವಣೆ ಮಾಡುವ ವ್ಯವಸ್ಥೆ ಇರಬೇಕು; ಮೀಸಲು ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಸೇರಿಸಬಾರದು ಎಂದು ಮನವಿಯಲ್ಲಿ ಸೂಚಿಸಲಾಗಿದೆ.

ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಟ್ಟಿರುವ ಕೆಲವು ಜಾತಿಗಳನ್ನು ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಜಾತಿ ಪ್ರಮಾಣ ಪತ್ರ ವಿತರಣೆಯ ತಂತ್ರಾಂಶವನ್ನು ಸರಳೀಕರಿಸಿ, ವಿದ್ಯಾರ್ಥಿಗಳಿಗೆ ಯಾವುದೇ ಶೈಕ್ಷಣಿಕ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಬಲಗೈ ಹಾಗೂ ವಿದ್ಯಾರ್ಥಿ ಸಂಘಟನೆಗಳು ಉಗ್ರ ಹೋರಾಟ ನಡೆಸಲಿವೆ ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ರಾಹುಲ್ ಗಾಯಕವಾಡ್, ಶಿವಕುಮಾರ, ರಜನಿಕಾಂತ, ಅಭಿಲಾಶ, ಮಲ್ಲೇಶ, ಸಚಿನ್, ಜೈ ಭೀಮ, ವಿಶ್ವರಾಜ, ಜೈ ಭೀಮ ಚಂದ್ರಕಾಂತ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button