ತೆಗ್ಗೆಳ್ಳಿ ರುದ್ರ ಭೂಮಿಗೆ ಹೋಗಲು ದಾರಿ ಕೊಡಿ: ದಲಿತ ಮುಖಂಡರ ಆಕ್ರೋಶ

ಕೆಂಭಾವಿ : ತೆಗ್ಗೆಳ್ಳಿ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ರುದ್ರಭೂಮಿಗೆ ಹೋಗಿ ಬರಲು ದಾರಿ ಇಲ್ಲದ ಕಾರಣ ಶವ ಸಂಸ್ಕಾರಕ್ಕೂ ಅಡೆತಡೆ ಉಂಟಾಗುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಮುಖಂಡರು, ಹುಣಸಗಿ ತಾಲೂಕಿನ ತೆಗ್ಗೆಳ್ಳಿ ಗ್ರಾಮದಲ್ಲಿ ದಲಿತರ ಶವ ಸಂಸ್ಕಾರಕ್ಕಾಗಿ ಹಲವು ವರ್ಷಗಳ ಹಿಂದೆ ಗ್ರಾಮದ ಶ್ರೀ ಸಿದ್ರಾಯಪ್ಪಗೌಡ ತಂ/ಸಂಗಪ್ಪಗೌಡ ಮೇಟಿ ಅವರು ಸುಮಾರು 2 ಎಕರೆ ಭೂಮಿಯನ್ನು ದಾನದ ರೂಪದಲ್ಲಿ ನೀಡಿದ್ದರೆಂದು ತಿಳಿಸಿದ್ದಾರೆ.
ಆದರೆ ಆ ರುದ್ರಭೂಮಿಗೆ ಹೋಗಬೇಕಾದರೆ ಗೌಂಠಾಣದ ಮೂಲಕವೇ ಹಾದು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಇತ್ತೀಚೆಗೆ ಗ್ರಾಮದಲ್ಲಿನ ಕೆಲವು ಮುಖಂಡರು ರುದ್ರಭೂಮಿಗೆ ಹೋಗುವುದಕ್ಕೆ ತಕರಾರು ಮಾಡುತ್ತಿರುವುದರಿಂದ ದಲಿತ ಸಮುದಾಯದವರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
2021ರಿಂದ ಮನವಿ… ಪರಿಹಾರವಿಲ್ಲ!
ಈ ಸಮಸ್ಯೆ ಕುರಿತು 2021ರಿಂದಲೇ ಸಂಬಂಧಿತ ಇಲಾಖೆಗೆ ಹಲವಾರು ಮನವಿಪತ್ರಗಳನ್ನು ಸಲ್ಲಿಸಿದ್ದೇವೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ “ಸಮಸ್ಯೆ ಬಗೆಹರಿಸುತ್ತೇವೆ” ಎಂದು ಭರವಸೆ ನೀಡಿದರೂ, ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ದಲಿತ ಸಮುದಾಯದ ಯಾರಾದರೂ ನಿಧನರಾದರೆ, ರುದ್ರಭೂಮಿಗೆ ಹೋಗಲು ದಾರಿ ಇಲ್ಲದ ಕಾರಣ ಶವವನ್ನು ಮನೆಯಲ್ಲೇ ಹೂಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ನೋವು ವ್ಯಕ್ತಪಡಿಸಿದರು.
ಗೌಂಠಾಣ ಜಾಗ ತೆರವುಗೊಳಿಸಲು ಒತ್ತಾಯ
ರುದ್ರಭೂಮಿಗೆ ಹೋಗುವ ದಾರಿಯನ್ನು ಅಡ್ಡಿಪಡಿಸುತ್ತಿರುವ ಗೌಂಠಾಣ ಭೂಮಿಯ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಿ, ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
“ಈ ಬಾರಿ ಕೂಡ ನಮ್ಮ ಮನವಿಗೆ ಸ್ಪಂದಿಸದಿದ್ದರೆ, ತೆಗ್ಗೆಳ್ಳಿ ಗ್ರಾಮದ ದಲಿತ ಕುಟುಂಬಗಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಬಹುದು” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಗ್ಯಾಂಗರಿ, ಮುಕ್ಕಣ್ಣ ಸಕ್ರೆಪ್ಪ, ಭೀಮಣ್ಣ, ಸಿದ್ದಣ್ಣ, ಭೀಮರಾಯ ದೊಡಮನಿ, ಶರಣಪ್ಪ ಮೌನೇಶ, ಶಿವಪುತ್ರ, ಭೀಮಶೆಪ್ಪ, ಚನ್ನಬಸಪ್ಪ, ಸಿದ್ದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.



