ನೈಜ ಕಟ್ಟಡ ಕಾರ್ಮಿಕನ ಪಿಂಚಣಿ ಅರ್ಜಿ ತಿರಸ್ಕಾರ ಖಂಡಿಸಿ ಕ್ರಮಕ್ಕೆ ಒತ್ತಾಯ
30 ವರ್ಷ ದುಡಿದ ಕಾರ್ಮಿಕನಿಗೆ ಪಿಂಚಣಿ ನಿರಾಕರಣೆ; ಶಂಕರ ಕಟ್ಟಿಸಂಗಾವಿ ಆಕ್ರೋಶ

ಕಲಬುರಗಿ: ನೈಜ ಕಟ್ಟಡ ಕಾರ್ಮಿಕನ ಪಿಂಚಣಿ ಅರ್ಜಿಯನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಿ ಕಾರ್ಮಿಕನ ಹಕ್ಕಿಗೆ ಧಕ್ಕೆ ಉಂಟುಮಾಡಿರುವ ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಂಡು ಅರ್ಜಿಯನ್ನು ಪುರಸ್ಕರಿಸಬೇಕು ಎಂದು ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ (KSCWCU/NCL) ಆಗ್ರಹಿಸಿದೆ.
ಈ ಕುರಿತು ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ ಅವರು, ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದ ಸುಭಾಷ್ ಶರಣಪ್ಪ ಉಪ್ಪಾರ ಅವರು ಸುಮಾರು 30 ವರ್ಷಗಳಿಂದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಗೌಂಡಿ ಕೆಲಸ ನಿರ್ವಹಿಸುತ್ತಿದ್ದು, 2017ರಲ್ಲಿ ಸೇವಾಸಿಂಧು ಮೂಲಕ ಕಟ್ಟಡ ಕಾರ್ಮಿಕರ ನೋಂದಣಿ ಕಾರ್ಡ್ ಪಡೆದುಕೊಂಡಿದ್ದಾರೆ. ಅಲ್ಲಿಂದ ನಿರಂತರವಾಗಿ ಕಾರ್ಡ್ ನವೀಕರಣ ಮಾಡಿಸಿಕೊಂಡು ಇ-ಕಾರ್ಡ್ ಸಹ ಪಡೆದಿದ್ದಾರೆ ಎಂದು ಹೇಳಿದರು .
ಕಾರ್ಮಿಕ ಕಲ್ಯಾಣ ಮಂಡಳಿಯ ನಿಯಮಾನುಸಾರ ಕಾರ್ಡ್ ಚಾಲ್ತಿಯಲ್ಲಿದ್ದರೂ, 60 ವರ್ಷ ಪೂರೈಸಿದ ಬಳಿಕ ಸಲ್ಲಿಸಿದ ಪಿಂಚಣಿ ಅರ್ಜಿಯನ್ನು ಅಧಿಕಾರಿಗಳು ತಿರಸ್ಕರಿಸಿರುವುದು ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಅರ್ಜಿ ಪರಿಶೀಲನೆ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಕೇಂದ್ರದ ಸಿಬ್ಬಂದಿ ಹಾಗೂ ಕಾರ್ಮಿಕ ಇಲಾಖೆಯ ಡಿಇಒ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಸುಭಾಷ್ ಅವರು ನೈಜ ಕಾರ್ಮಿಕ ಎಂದು ವರದಿ ನೀಡಿದ್ದರು. ಆದಾಗ್ಯೂ, ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಸಿಬ್ಬಂದಿ ಯಾವುದೇ ಸಮಗ್ರ ಪರಿಶೀಲನೆ ನಡೆಸದೆ ಏಕಪಕ್ಷೀಯವಾಗಿ “ನಕಲಿ ಲೇಬರ್ ಕಾರ್ಡ್” ಎಂದು ಘೋಷಿಸಿ ಅರ್ಜಿಯನ್ನು ತಿರಸ್ಕರಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು .
ನಕಲಿ ಕಾರ್ಡ್ ಎಂದು ಪರಿಗಣಿಸಿದ್ದರೆ ಅದನ್ನು ಯಾವ ಆಧಾರದ ಮೇಲೆ ಸಾಬೀತುಪಡಿಸಲಾಗಿದೆ, ನಕಲಿ ಕಾರ್ಡ್ ವಿರುದ್ಧ ಮೇಲ್ಮನವಿ ಸಲ್ಲಿಸಲು ವೆಬ್‌ಸೈಟ್‌ನಲ್ಲಿ ಅವಕಾಶ ಏಕೆ ಇಲ್ಲ, ನಕಲಿ ಕಾರ್ಡ್ ಪತ್ತೆಹಚ್ಚಲು ಯಾವ ತಂತ್ರಾಂಶ ಬಳಸಲಾಗಿದೆ ಹಾಗೂ ನೈಜ ಕಾರ್ಮಿಕನಾಗಿರುವುದು ಸಾಬೀತಾದಲ್ಲಿ ಇಲಾಖೆಯ ಕ್ರಮವೇನು ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಸಂಘ ಆಗ್ರಹಿಸಿದೆ.
ಕೊನೆಯ ಹಂತದ ಜೀವನದಲ್ಲಿ ಪಿಂಚಣಿ ಸೌಲಭ್ಯಕ್ಕಾಗಿ ಕಾಯುತ್ತಿರುವ ಬಡ ಕಟ್ಟಡ ಕಾರ್ಮಿಕನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಉಪ ಕಾರ್ಮಿಕ ಆಯುಕ್ತರು ಮಧ್ಯಪ್ರವೇಶಿಸಿ ಅರ್ಜಿಯನ್ನು ಮರುಪರಿಶೀಲಿಸಿ ಪುರಸ್ಕರಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಹ್ಮದ್ ಮೋಸಿನ್ ಪಟೇಲ್, ಜಿಲ್ಲಾ ಕಾರ್ಯದರ್ಶಿ ಹೊನ್ನಪ್ಪ ಬಿ.ಕೆ. ಸುಂಬಡ್, ತಾಲೂಕು ಪ್ರಚಾರ ಕಾರ್ಯದರ್ಶಿ ಕಾಂತಪ್ಪ ಕಲ್ಲೂರು, ತಾಲೂಕು ಉಪಾಧ್ಯಕ್ಷ ಭೀಮರಾಯಗೌಡ ಕಡಕೋಳ ಹಾಗೂ ನಗರ ಘಟಕದ ಉಪಾಧ್ಯಕ್ಷ ಅಪ್ಪಣ್ಣ ಕಂಡೋಳಿ ಉಪಸ್ಥಿತರಿದ್ದರು.




