ಮದರಸಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ

ಕೆಂಭಾವಿ: ಪಟ್ಟಣದ ಮದರಸಾ ಗುಲ್ಶನ್-ಎ-ನೂರಿಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ಗಳ ವಿತರಣಾ ಕಾರ್ಯಕ್ರಮ ಭಾನುವಾರ ನಡೆಯಿತು.
ಸಮಾಜಸೇವಕ ಅಲ್ಹಾಜ್ ಇಸ್ಮಾಯಿಲ್ ಸಾಬ್ ಮದ್ರಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಮದರಸಾದ ವಿದ್ಯಾರ್ಥಿಗಳಿಗೆ ಬ್ಯಾಗ್ಗಳನ್ನು ವಿತರಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಶೈಕ್ಷಣಿಕ ಪರಿಕರಗಳ ನೆರವು ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಅವರ ಭವಿಷ್ಯ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮದರಸಾದ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಹಾಗೂ ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಬ್ಯಾಗ್ಗಳನ್ನು ವಿತರಿಸುವ ಮೂಲಕ ಶಿಕ್ಷಣದ ಬಗ್ಗೆ ಕಾಳಜಿ ತೋರಿದ ಇಸ್ಮಾಯಿಲ್ ಸಾಬ್ ಮದ್ರಿ ಅವರ ಸೇವಾಭಾವವನ್ನು ಮದರಸಾ ಆಡಳಿತ ಮಂಡಳಿಯವರು ಶ್ಲಾಘಿಸಿದರು.ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹೀಬೂಬ್ ಸಾಬ್ ನಾಸಿ, ಸಾಹೇಬ್ ಲಾಲ್ ಸಾಬ್ ಆಂದೇಲಿ, ಶಬ್ಬೀರ್ ಪೇಶಮಾಮ್, ಅದಮ್ ಸಾಬ್, ಮಹಮ್ಮದ್ ನಾಸಿ, ರಜಾಕ್ ಸಾಬ್ ಸಾಸನೂರ, ಬಂದೇನವಾಜ ನಾಲತವಾಡ, ವಾಹೀದ್ ಮೇತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




