ಒಪಿಎಸ್ ಮಂಜೂರಿಗೆ ಒತ್ತಾಯ: ಅನುದಾನಿತ ನೌಕರರಿಂದ ಜಿಲ್ಲಾಧಿಕಾರಿಗೆ ಮನವಿ

ಕಲಬುರಗಿ: 2006ರ ಏಪ್ರಿಲ್ 1ರ ಪೂರ್ವದಲ್ಲಿ ಸೇವೆಗೆ ಸೇರಿದ ಅನುದಾನಿತ ಶಾಲಾ ಹಾಗೂ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜು ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟದ ಮುಖಂಡರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
2006ರ ಏಪ್ರಿಲ್ 1ರ ಮೊದಲು ಅಧಿಸೂಚನೆ ಹೊರಡಿಸಿ ನಂತರ ಕರ್ತವ್ಯಕ್ಕೆ ಹಾಜರಾದ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರಿಗೆ ಹಳೆ ಪಿಂಚಣಿ ಅನ್ವಯಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಸರ್ಕಾರ ಆದೇಶ ಹೊರಡಿಸಿರುವುದನ್ನು ಉಲ್ಲೇಖಿಸಿ, ಅನುದಾನಿತ ನೌಕರರಿಗೂ ಇದೇ ಅನ್ವಯವಾಗಬೇಕು ಎಂದು ಒಕ್ಕೂಟದ ಮುಖಂಡರು ಆಗ್ರಹಿಸಿದರು.
ಮನವಿ ಸಲ್ಲಿಕೆಯಲ್ಲಿ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಬಿ.ಎಸ್. ಮಾಲಿಪಾಟೀಲ್, ಮಹಾದೇವಪ್ಪ ಹೊಸಳ್ಳಿ, ದಯಾನಂದ ಬಂದರವಾಡ, ವೀರಣ್ಣಗೌಡ, ಭೀಮಣ್ಣ ನಾಯಕ್, ಶಿವುಕುಮಾರ ಸಜ್ಜನ್, ಶಿವರಾಜ ನಂದಗಾವ, ಅಶೋಕ ನಂದಿ ಮತ್ತು ಕಾಂತಪ್ಪ ಬಡಿಗೇರ ಉಪಸ್ಥಿತರಿದ್ದರು.