ಪ್ರತಿ ಎಕರೆಗೆ 25 ಸಾವಿರ ಪರಿಹಾರ ಬೇಡಿಕೆ: ರೈತ ಸಂಘ ಹಸಿರು ಸೇನೆ ಪ್ರತಿಭಟನೆ

ಚಿತ್ತಾಪುರ: ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ಚಿತ್ತಾಪುರ ತಾಲೂಕವನ್ನು ಅತಿವೃಷ್ಟಿ ತಾಲೂಕವೆಂದು ಘೋಷಣೆ ಮಾಡಿ,ಎಲ್ಲ ರೈತರಿಗೆ ಪ್ರತಿ ಎಕರೆಗೆ ೨೫ ಸಾವಿರ ರೂಪಾಯಿ ಬೆಳೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ (ವಾಸುದೇವ ಮೇಟಿ ಬಣ) ತಾಲೂಕು ಅಧ್ಯಕ್ಷ ಮೌನೇಶ ಭಂಕಲಗಿ ಒತ್ತಾಯಿಸಿದರು.
ಪಟ್ಟಣದ ಪ್ರಜಾಸೌಧ ಕಟ್ಟಡದ ಎದುರು ಅತಿ ಹೆಚ್ಚಿನ ಮಳೆಯಿಂದಾಗಿ ಮುಂಗಾರು ಬೆಳೆಗಳು ಹಾಳಾಗಿರು ವದರಿಂದ ಎಲ್ಲ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಮುಂಗಾರು ಮಳೆಯ ಅತಿವೃಷ್ಟಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ಭಾರೀ ಮಳೆಯಿಂದಾಗಿ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಯ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಹೆಸರು,ಉದ್ದು, ಹತ್ತಿ, ಮತ್ತು ತೊಗರಿ ಬೆಳೆ ಹಾಳಾದ ರೈತರು ತಮ್ಮ ಜೀವನಾಧಾರವನ್ನೇ ಕಳೆದುಕೊಂಡು ಆರ್ಥಿಕ ಸಂಕಷ್ಟದಿ0ದ ಬಳಲುತ್ತಿದ್ದಾರೆ ಎಂದು ಹೇಳಿದರು.
ತಾಲೂಕಿನಾದ್ಯಂತ ನಿರಂತರವಾಗಿ ಎರಡು ತಿಂಗಳುಗಳ ಕಾಲ ಸುರಿದ ಮಹಾ ಮಳೆಗೆ ರೈತರ ವಾಣಿಜ್ಯ ಬೆಳೆಗಳು ಸಂಪೂರ್ಣವಾಗಿ ಹಾನಿಯಾದ ಪರಿಣಾಮ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅನ್ನ ನೀಡುವ ಅನ್ನದಾತನ ನೆರವಿಗೆ ಬರಬೇಕೆಂದರು.
ತಾಲೂಕಿನಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಕಡಬೂರ, ಬಳವಡಗಿ ಸೇರಿದ ಇತರೆ ಗ್ರಾಮಗಳನ್ನು ಸುರಕ್ಷಿತ ಸ್ಥಳಕ್ಕೆ ಕೂಡಲೇ ಸ್ಥಳಾಂತರ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಪ್ರವಾಹದಿಂದ ಮುಳುಗಡೆಯಾಗಿದ್ದ ಕುಟುಂಬಸ್ಥರಿಗೆ ಜೀವನ ನಿರ್ವಹಣೆಗಾಗಿ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಬೇಕು. ಪ್ರವಾಹದಿಂದ ಸಾವನ್ನಪ್ಪಿದ ದನ ಕರುಗಳ ವಾರಸುದಾರರಿಗೆ ೧ ಲಕ್ಷ ಪರಿಹಾರ ನೀಡಬೇಕು. ಕಡಲೆ ಬೀಜ, ಡಿಎಪಿ ರಸಗೊಬ್ಬರ ಉಚಿತವಾಗಿ ನೀಡಬೇಕು. ಬೆಳೆ ವಿಮೆ ಶೀಘ್ರದಲ್ಲಿ ಬಿಡುಗಡೆ ಮಾಡಬೇಕು. ಕಳಪೆ ರಸಗೊಬ್ಬರ ಬಯೋ ಕ್ರಿಮಿನಾಶಕ ಔಷಧಿಗಳು ಮಾರುವ ಆಗ್ರೋ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅತಿ ಮಳೆಯಿಂದ ಹದಗೆಟ್ಟ ರಸ್ತೆಗಳನ್ನು ಸುಧಾರಣೆ ಮಾಡಬೇಕು. ಚಿತ್ತಾಪುರ ತಾಲೂಕಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ನಿರ್ಲಕ್ಷ್ಯ ವಹಿಸಿದರೆ ನಿರಂತರ ಹೋರಾಟ ನಡೆಸಲಾಗುವುದೆಂದು ಹೇಳಿದರು. ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಕಂದಾಯ ಇಲಾಖೆಯ ಶಿರಸ್ತೆದಾರ ಅಶ್ವತನಾರಾಯಣ ಕುಲಕರ್ಣಿ ಅವರಿಗೆ ಸಲ್ಲಿಸಿದರು.
ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷ ಪ್ರಶಾಂತ್ ರೆಡ್ಡಿ ಮಾಲಿ ಪಾಟೀಲ್, ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ, ತಾಲೂಕು ಗೌರವಾಧ್ಯಕ್ಷ ಶಾಂತಕುಮಾರ್ ಮಳಖೇಡ, ಉಪಾಧ್ಯಕ್ಷ ರಮೇಶ್ ಬೊಮ್ಮನಹಳ್ಳಿ ಮಾತನಾಡಿದರು. ಸೇನೆಯ ಉಪಾಧ್ಯಕ್ಷರಾದ ದಶರಥ ದೊಡ್ಮನಿ, ವಿಶ್ವರಾಜ್ ನೆನಕ್ಕಿ, ಸಹ ಕಾರ್ಯದರ್ಶಿಗಳಾದ ಬಸವರಾಜ ಇಂಗಳಗಿ, ಹಣಮಂತ ಕಲಾಲ್, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ವಿಜಯಪುರಕರ್, ಸಂಚಾಲಕ ಬಸಲಿಂಗಪ್ಪಗೌಡ ದಂಡಗುoಡ, ಖಜಂಚಿ ಯಲ್ಲಾಲಿಂಗ ಸುಲ್ತಾನಪುರ್, ನಗರಾಧ್ಯಕ್ಷ ವಿಠಲ್ ಕಟ್ಟಿಮನಿ, ಪ್ರಮುಖರಾದ ಮಲ್ಲಣ್ಣ ಹೊನ್ನಪ್ಪನೋರ, ರಾಕೇಶ್ ಮುಗುಳನಾಗವಿ, ರಾಮರೆಡ್ಡಿ ಭಂಕಲಗಿ, ಮಲ್ಲಿಕಾರ್ಜುನ್ ಭಂಕಲಗಿ, ಅಂಬಣ್ಣ ಹೋಳಿಕಟ್ಟಿ, ತಿಪ್ಪಣ್ಣ ಇವಣಿ, ಅರ್ಜುನ್ ಭಂಕಲಗಿ, ಅನೀಲ್ ಚಾಮನೂರ, ಅಕ್ಷಯ ಸಾತನೂರ್, ಚನ್ನಪ್ಪ ಮೂಲಿಮನಿ, ಶಿವಕುಮಾರ ಹೊಸೂರ್ ಸೇರಿದಂತೆ ಇತರರಿದ್ದರು.