ಕಲಬುರಗಿಚಿತ್ರ ಸುದ್ದಿ

ಗ್ರಾಮೀಣ ಪ್ರತಿಭೆಗೆ ಜಾಗತಿಕ ಗೌರವ: ಅಫಜಲಪುರದ ಅನೀಲ್ ರೇವೂರ್ ‘ನಮ್ ಸಾಲಿ’ ಚಿತ್ರ ಅಂತರಾಷ್ಟ್ರೀಯ ವೇದಿಕೆಗೆ

ಅಫಜಲಪುರ:ಕನ್ನಡ ಚಿತ್ರರಂಗ ತನ್ನ ಐದು ದಶಕಗಳ ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಅಫಜಲಪುರ ಮೂಲದ ಯುವ ನಿರ್ದೇಶಕ ಅನೀಲ್ ರೇವೂರ್ ಅವರ “ನಮ್ ಸಾಲಿ” (Our School) ಚಿತ್ರವು 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಅಫಜಲಪುರ ತಾಲೂಕಿನ ಕಲೆ, ಸಂಸ್ಕೃತಿ ಹಾಗೂ ಸೃಜನಶೀಲತೆಗೆ ದೊರೆತ ಮಹತ್ವದ ಗೌರವವಾಗಿದೆ.

2026ರ ಜನವರಿ 29ರಿಂದ ಫೆಬ್ರವರಿ 6ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶ್ವದ ಸುಮಾರು 70 ದೇಶಗಳ ವಿವಿಧ ಭಾಷೆಗಳ 225 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇಂತಹ ಭಾರಿ ಹಾಗೂ ಸ್ಪರ್ಧಾತ್ಮಕ ವೇದಿಕೆಯಲ್ಲಿ ಕನ್ನಡದಿಂದ ಕೇವಲ 15 ಚಿತ್ರಗಳು ಮಾತ್ರ ಆಯ್ಕೆಯಾಗಿರುವುದು ವಿಶೇಷ. ಪಿ. ಶೇಷಾದ್ರಿ, ರಿಷಭ್ ಶೆಟ್ಟಿ ಮುಂತಾದ ದಿಗ್ಗಜ ನಿರ್ದೇಶಕರ ಸಾಲಿನಲ್ಲಿ ಅಫಜಲಪುರದ ಯುವ ನಿರ್ದೇಶಕ ಅನೀಲ್ ರೇವೂರ್ ಅವರ ಚಿತ್ರ ಸ್ಥಾನ ಪಡೆದಿರುವುದು, ಗ್ರಾಮೀಣ ಭಾಗಗಳಿಂದಲೂ ಅಂತರಾಷ್ಟ್ರೀಯ ಮಟ್ಟದ ಪ್ರತಿಭೆಗಳು ಹೊರಹೊಮ್ಮುತ್ತಿವೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

“ನಮ್ ಸಾಲಿ” ಚಿತ್ರವು ಗ್ರಾಮೀಣ ಬದುಕು, ಸರ್ಕಾರಿ ಶಾಲೆಗಳ ವಾಸ್ತವ ಪರಿಸ್ಥಿತಿ ಹಾಗೂ ಶಿಕ್ಷಣ ವ್ಯವಸ್ಥೆಯ ಒಳಗಿರುವ ಸವಾಲುಗಳನ್ನು ಸಂವೇದನಾಶೀಲವಾಗಿ ತೆರೆಮೇಲೆ ತರುತ್ತದೆ. ಸುಮಾರು 90 ನಿಮಿಷಗಳ ಈ ಚಿತ್ರ ಮನರಂಜನೆಯ ಮಿತಿಯನ್ನು ಮೀರಿ, ಸಮಾಜದಲ್ಲಿರುವ ಅಸಮಾನತೆ, ನಿರ್ಲಕ್ಷ್ಯ ಮತ್ತು ಅನುತ್ತರಿತ ಪ್ರಶ್ನೆಗಳತ್ತ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನ ಮಾಡುತ್ತದೆ.

ಈ ಚಿತ್ರದಲ್ಲಿ ಅಫಜಲಪುರ ತಾಲೂಕಿನ ಶಿವಶರಣಪ್ಪ ಗೌರ ಅವರ ಪುತ್ರಿ ಗೌರಿ ಅಭಿನಯಿಸಿದ್ದು, ಗ್ರಾಮೀಣ ಹಿನ್ನೆಲೆಯ ಕಲಾವಿದರು ಹಾಗೂ ತಾಂತ್ರಿಕ ಬಳಗದೊಂದಿಗೆ ನಿರ್ಮಾಣವಾದ ಚಿತ್ರಕ್ಕೆ ಅಂತರಾಷ್ಟ್ರೀಯ ಮಾನ್ಯತೆ ದೊರೆತಿರುವುದು ಇನ್ನಷ್ಟು ವಿಶೇಷತೆ ಪಡೆದುಕೊಂಡಿದೆ ಎಂದು ರವಿ ಗೌರ್ ಅಭಿಪ್ರಾಯಪಟ್ಟರು.

ಈ ಸಾಧನೆಗೆ ಸಾಹಿತಿ ಡಿ. ಎಂ. ನದಾಫ್, ಸುನಿಲ್ ಜಾಬಾದಿ, ಶ್ರೀಮಂತ ಬಿರಾದಾರ, ಬಿ. ಎಂ. ರಾವ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅನೀಲ್ ರೇವೂರ್ ಅವರ ಈ ಯಶಸ್ಸು ಅಫಜಲಪುರದ ಯುವ ಪ್ರತಿಭೆಗಳಿಗೆ ಹೊಸ ದಿಕ್ಕು ಮತ್ತು ಪ್ರೇರಣೆಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button