ಕಲಬುರಗಿಜಿಲ್ಲಾಸುದ್ದಿ

ಜ.10ರಂದು ಗ್ಯಾರಂಟಿಗಳಲ್ಲಿ ಮುಳುಗಿದ ಸರ್ಕಾರದ ವಿರುದ್ಧ ಕುದರೆ–ಕತ್ತೆಗಳೊಂದಿಗೆ ವಿನೂತನ ಹೋರಾಟ

ಕಲಬುರಗಿ:ಕೇವಲ ಗ್ಯಾರಂಟಿ ಯೋಜನೆಗಳಲ್ಲೇ ಸರ್ಕಾರ ಮುಳುಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದೆ. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರ ನೈಜ ಸಮಸ್ಯೆಗಳಿಗೆ ಸ್ಪಂದಿಸದೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ 2026ರ ಜನವರಿ 10ರಂದು ಕುದರೆ ಮತ್ತು ಕತ್ತೆಗಳೊಂದಿಗೆ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಓಬಿಸಿ ಮೋರ್ಚಾ ನಗರಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ತಿಂಗಳಿಗೆ ₹2,000 ನೀಡಲಾಗುತ್ತಿದೆ. ಆದರೆ ಇದರಿಂದ ಮಹಿಳೆಯರಿಗೆ ಶಾಶ್ವತ ಲಾಭವೇನು? ಹಣ ಹಂಚುವ ಬದಲು ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಗಳನ್ನು ರೂಪಿಸಬೇಕಿತ್ತು ಎಂದು ಅವರು ಪ್ರಶ್ನಿಸಿದರು. ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ಅಕ್ಕಿ ನೀಡುವ ಬದಲು ತಲಾ ₹38 ಹಣವನ್ನು ಖಾತೆಗೆ ಹಾಕಲಾಗುತ್ತಿದೆ. ಹಣದ ಬದಲು ಅಕ್ಕಿ ಖರೀದಿಸಿ ವಿತರಿಸಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಎಂದು ಕಟುವಾಗಿ ಪ್ರಶ್ನಿಸಿದರು.

ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಎನ್ನಲಾಗುತ್ತಿದರೂ, ಅದರ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ವಿದ್ಯುತ್ ದರ ಏರಿಕೆಯ ಮೂಲಕ ಹಾಕಲಾಗುತ್ತಿದೆ. ವಾಣಿಜ್ಯ ವಿದ್ಯುತ್ ದರ ಹೆಚ್ಚಳದಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಹೇಳಿದರು. ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ನೀಡಲಾಗಿದೆ. ಆದರೆ ಅದರ ನೇರ ಹೊರೆ ಕೂಡ ಜನಸಾಮಾನ್ಯರ ಜೇಬಿನ ಮೇಲೆಯೇ ಬೀಳುತ್ತಿದೆ ಎಂದು ಆರೋಪಿಸಿದರು.

ಯುವಜನತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ “ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ” ತಂತ್ರ ಅನುಸರಿಸುತ್ತಿದೆ ಎಂದು ಟೀಕಿಸಿದ ಅವರು, 2023ರಲ್ಲಿ ಮಾತ್ರ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗ್ಯಾರಂಟಿ ಯೋಜನೆಗಳ ಲಾಭ ಸಿಗುತ್ತಿದೆ. ಆದರೆ 2023ರ ಹಿಂದೆಯೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ಹೋರಾಡುತ್ತಿರುವ ಲಕ್ಷಾಂತರ ಯುವಕರು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ಯಾರಂಟಿ ಸ್ಕೀಮ್‌ಗಳ ಹೆಸರಿನಲ್ಲಿ ಅಭಿವೃದ್ಧಿಯನ್ನು ಮರೆಚಿದ ಪರಿಣಾಮ, ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಲಬುರಗಿ ನಗರದಲ್ಲಿನ ಪ್ರಮುಖ ರಸ್ತೆಗಳ ಟಾರ್ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ದುರಸ್ತಿ ಮಾಡಲು ಹಣವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಗ್ರಾಮೀಣ ರಸ್ತೆಗಳ ಸ್ಥಿತಿ ಇನ್ನೂ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನೂ ಎರಡು ತಿಂಗಳಲ್ಲಿ ಬೇಸಿಗೆ ಆರಂಭವಾಗಲಿದ್ದು, ಈಗಾಗಲೇ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಜಿಲ್ಲಾಡಳಿತಗಳು ಈಗಲೇ ಕಾರ್ಯಪ್ರವೃತ್ತರಾಗದೇ ಇದ್ದರೆ, ಬೇಸಿಗೆಯಲ್ಲಿ ಜನರು ವಲಸೆ ಹೋಗುವ ಹಾಗೂ ಜಾನುವಾರುಗಳು ನೀರಿಲ್ಲದೆ ಸಾಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

ಸರ್ಕಾರವು ಗ್ಯಾರಂಟಿಗಳಲ್ಲೇ ತಲೆ ಹಾಕದೆ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡಬೇಕು. ಕಲಬುರಗಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣವೇ ಬಂದ್ ಆಗುವ ಸ್ಥಿತಿಗೆ ಬಂದಿದೆ. ಕೈಗಾರಿಕೆಗಳಿಲ್ಲದೇ ವಿಮಾನ ನಿಲ್ದಾಣದ ಅವಶ್ಯಕತೆ ಏನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ ಎಂದು ಹೇಳಿದರು.

ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ ಸಣ್ಣಪುಟ್ಟ ಉದ್ಯಮಗಳು ಬೆಳೆಯುತ್ತವೆ, ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ. ಈ ಕುರಿತು ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಷ್ಟ ಯೋಜನೆ ರೂಪಿಸಬೇಕು ಎಂದು ಮಾನ್ಯ ಜಿಲ್ಲಾಧಿಕಾರಿ ಮುಖಾಂತರವಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ ಎಂದು ದೇವೇಂದ್ರ ದೇಸಾಯಿ ಕಲ್ಲೂರ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button