ದಂಡೋತಿ: ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣಾ ಮಾಸಾಚರಣೆ, ಐಸಿಡಿಎಸ್ 50 ವರ್ಷ ತುಂಬಿದ ಪ್ರಯುಕ್ತ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಆರತಿ ತುಪ್ಪದ, ಗರ್ಭಿಣಿ ಮಹಿಳೆಯರು ಗುಣಮಟ್ಟದ ಆಹಾರಗಳನ್ನು ಯತೇಚ್ಛವಾಗಿ ಸೇವಿಸಬೇಕು. ನಿಮ್ಮ ದೇಹದಲ್ಲಿ ಪೌಷ್ಟಿಕ ಆಹಾರದ ಕೊರತೆ ಉಂಟಾದರೆ ಅಪೌಷ್ಟಿಕತೆಗೆ ತುತ್ತಾಗಬೇಕಾಗುತ್ತದೆ. ಪ್ರತಿದಿನ ತರಕಾರಿ, ಹಣ್ಣುಗಳು ಹಾಗೂ ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.
6.ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ಬಾಣಂತಿಯರ ಆರೋಗ್ಯ ಮತ್ತು ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸಲು ಪ್ರಾರಂಭಿಸಿದ ಒಂದು ಪ್ರಮುಖ ಕಾರ್ಯಕ್ರಮ ಇದಾಗಿದೆ ಈ ಯೋಜನೆ ಪೂರಕವಾಗಿ ಪೋಷಣಾ, ಶಾಲಾಪೂರ್ವ ಶಿಕ್ಷಣ, ಪ್ರತಿರಕ್ಷಣೆ, ಆರೋಗ್ಯ ತಪಾಸಣೆ ಮತ್ತು ರೆಫರಲ್ ಸೇವೆಗಳನ್ನು ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು.
ದಂಡೋತಿ ಗ್ರಾಪಂ ಪಿಡಿಒ ರೇಣುಕಾ ಮಾತನಾಡಿ, ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಸ್ವಚ್ಚತೆ ಇಲ್ಲದಿದ್ದರೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಿ ಎಂದು ಹೇಳಿದರು.
ಮೇಲ್ವಿಚಾರಕಿ ಶೋಭಾ ಶೆಟ್ಟಿ, ಅಜೀಂ ಪ್ರೇಮ್ ಫೌಂಡೇಶನ್ ಸಂಯೋಜಕ ರೇಣುಕಾ, ಪ್ರಜ್ಞಾ ಫೌಂಡೇಶನ್ ತಿಪ್ಪಣ್, ಅಂಗನವಾಡಿ ಕಾರ್ಯಕರ್ತೆಯರಾದ ರೇಖಾ, ಬಸಮ್ಮ, ಅಕ್ಕಮಹಾದೇವಿ, ಸರಸ್ವತಿ, ವಿದ್ಯಾನಿಧಿ ಕವಡೆ, ಆಲಿಯಬೇಗಂ, ಸುಮಲತಾ, ರಾಜೇಶ್ವರಿ ಸೇರಿದಂತೆ ಸ್ತ್ರೀಶಕ್ತಿ ಸಂಘದ ಮಹಿಳೆಯರು ಹಾಗೂ ಮುದ್ದು ಮಕ್ಕಳು ಭಾಗವಹಿಸಿದ್ದರು. ಸುಮಲತಾ ಪ್ರಾರ್ಥನೆ ಗೀತೆ ಹಾಡಿದರು. ಅಂಗನವಾಡಿ ಕಾರ್ಯಕರ್ತೆ ವಿದ್ಯಾನಿಧಿ ಕವಡೆ ನಿರೂಪಿಸಿ, ವಂದಿಸಿದರು.