ಕಲಬುರಗಿಜಿಲ್ಲಾಸುದ್ದಿ

ಪ್ರಿಯಾಂಕ್ ಖರ್ಗೆ ಸೋಲಿಸುವುದೇ ಏಕೈಕ ಅಜೆಂಡಾ: ಮಣಿಕಂಠ ರಾಠೋಡ

“ನೂರು ಸಾರಿ ಕೇಸುಗಳು ಹಾಕಿ ಹತ್ತು ಸಾರಿ ಜೈಲಿಗೆ ಕಳುಹಿಸಿದರೂ ಚಿತ್ತಾಪುರ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತಿದ್ದೇನೆ ಇದೇ ನನ್ನ ಪ್ರಿಯಾಂಕ್ ಖರ್ಗೆ ಗೆ ನೀಡುವ ಗಿಫ್ಟ್”.-ಮಣಿಕಂಠ ರಾಠೋಡ ಬಿಜೆಪಿ ಪರಾಜಿತ ಅಭ್ಯರ್ಥಿ.

ಚಿತ್ತಾಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಷಡ್ಯಂತ್ರದ ಮೂಲಕ ಸೋಲುಂಟು ಮಾಡಲಾಗಿದೆ ಎಂದು ಆರೋಪಿಸಿದ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ, ಮುಂದಿನ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಲಾಡ್ಡಿಂಗ್ ಕ್ರಾಸ್ ಸಮೀಪ ಭಾನುವಾರ ರಾತ್ರಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಯೋಜಿಸಿದ್ದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕಳೆದ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಕುಟುಂಬದ ಹೆಸರನ್ನು ಬಳಸಿಕೊಂಡು ಷಡ್ಯಂತ್ರ ನಡೆಸಿ ನನ್ನನ್ನು ಅಲ್ಪ ಮತಗಳಿಂದ ಸೋಲಿಸಲಾಯಿತು” ಎಂದು ಆರೋಪಿಸಿದರು.

ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿಗೆ 67,683 ಮತಗಳು ಲಭಿಸಿದ್ದು ಜನರ ಆಶೀರ್ವಾದವೇ ಎಂದು ಹೇಳಿದ ಅವರು, “ನಮ್ಮ ಕುಟುಂಬದಲ್ಲಿ ಯಾರೂ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಹುದ್ದೆ ಹಿಡಿದಿಲ್ಲ. ಅನುಭವದ ಕೊರತೆ ಮತ್ತು ರಾಜಕೀಯ ಷಡ್ಯಂತ್ರದಿಂದ ಸೋಲು ಕಂಡೆ” ಎಂದು ಹೇಳಿದರು.

“ಪಕ್ಷದ ಹೈಕಮಾಂಡ್ ಕಳೆದ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಿತ್ತು. 2028ರ ವಿಧಾನಸಭಾ ಚುನಾವಣೆಯಲ್ಲಿಯೂ ಟಿಕೆಟ್ ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಬೇರೆ ಅಭ್ಯರ್ಥಿಗೆ ಅವಕಾಶ ಸಿಕ್ಕರೂ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು, “ಅವರ ಹಗರಣಗಳನ್ನು ಬಹಿರಂಗಪಡಿಸುವುದು ಹಾಗೂ ಗುಂಡಾಗಿರಿ ತಡೆಯುವುದು ನನ್ನ ಪ್ರಮುಖ ಉದ್ದೇಶ. ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸುವುದೇ ನನ್ನ ಏಕೈಕ ಅಜೆಂಡಾ” ಎಂದು ಹೇಳಿದರು.

ಚಿತ್ತಾಪುರ ಕ್ಷೇತ್ರದ ಜನತೆ ತಮ್ಮ ಮೇಲೆ ವಿಶ್ವಾಸ ಮತ್ತು ಪ್ರೀತಿ ತೋರಿಸುತ್ತಿರುವುದಾಗಿ ಹೇಳಿದ ಅವರು, “ಚುನಾವಣೆಗೆ ಮಾತ್ರ ಸೀಮಿತವಾಗದೇ ಜನರು ನನ್ನನ್ನು ಮನೆಯ ಮಗನಂತೆ ಕಾಣುತ್ತಿದ್ದಾರೆ” ಎಂದರು.

“ಕ್ಷೇತ್ರದಲ್ಲಿ ಯಾರೇ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದರೂ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹೆಚ್ಚಿನ ಆಕಾಂಕ್ಷಿಗಳು ಬಂದರೆ ಪಕ್ಷ ಮತ್ತಷ್ಟು ಬಲಿಷ್ಠವಾಗುತ್ತದೆ” ಎಂದು ಹೇಳಿದರು.

ತಮ್ಮ ಮೇಲೆ ಪ್ರಕರಣಗಳನ್ನು ದಾಖಲಿಸಿ ಗಡಿಪಾರು ಮಾಡಲಾಗಿದೆ ಎಂದು ಆರೋಪಿಸಿದ ಅವರು, “2024 ಡಿಸೆಂಬರ್‌ನಲ್ಲಿ ಕ್ಷೇತ್ರಕ್ಕೆ ಬಾರದಂತೆ ಮಾಡಲಾಯಿತು. ಸುಳ್ಳು ಪ್ರಕರಣಗಳಿಂದ ಜೈಲಿಗೂ ಕಳುಹಿಸಿದರೂ ಮತ್ತೆ ಎದ್ದು ನಿಲ್ಲುವ ಶಕ್ತಿ ಜನರಿಂದಲೇ ಬಂದಿದೆ” ಎಂದು ಹೇಳಿದರು.

ಇತ್ತೀಚೆಗೆ ನಡೆದ ಕಾರ್ಯಕ್ರಮಗಳಿಗೆ ಜನರನ್ನು ಹಣ ನೀಡಿ ಕರೆತರಲಾಗಿದೆ ಎಂದು ಪರೋಕ್ಷವಾಗಿ ಟೀಕಿಸಿದ ಅವರು, “ಆದರೆ ನನಗೆ ಹೋಗುವ ಎಲ್ಲೆಡೆ ಜನರು ಸ್ವಯಂ ಪ್ರೇರಿತವಾಗಿ ಸ್ವಾಗತಿಸುತ್ತಿದ್ದಾರೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಶ್ವಥ್ ರಾಠೋಡ ಸೇರಿದಂತೆ ಶ್ರೀಕಾಂತ್ ಸುಲೇಗಾಂವ, ಜಿ.ಎಸ್. ಹಿರೇಮಠ, ಶಂಭುಲಿಂಗ ವಿಶ್ವಕರ್ಮ, ಸುನೀಲ್ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button