ಕಲಬುರಗಿಜಿಲ್ಲಾಸುದ್ದಿ

ಬಸವಕಲ್ಯಾಣದ ಅರಿವಿನ ಗವಿಯಲ್ಲಿ ಹಡಪದ ಅಪ್ಪಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ

ಅನ್ಯ ಮೂರ್ತಿ ತೆರವುಗೊಳಿಸಿ ನ್ಯಾಯ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ

ಕಲಬುರಗಿ: ಬಸವಕಲ್ಯಾಣದಲ್ಲಿರುವ ವಿಶ್ವಗುರು ಬಸವಣ್ಣ ಅವರ ಅರಿವಿನ ಮನೆಯ ಪಕ್ಕದಲ್ಲಿರುವ ಶರಣ ಹಡಪದ ಅಪ್ಪಣ್ಣ ಅವರ ಅರಿವಿನ ಗವಿಯಲ್ಲಿ ಅಪ್ಪಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಆಗ್ರಹಿಸಿದೆ.

ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, 12ನೇ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಅರಿವಿನ ಗವಿಯು ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿಯೇ ಇರುವ ಐತಿಹಾಸಿಕ ಸ್ಥಳವಾಗಿದ್ದು, ಅದಕ್ಕೆ ವಿಶೇಷ ಮಹತ್ವವಿದೆ ಎಂದು ತಿಳಿಸಿದ್ದಾರೆ.

ಆದರೆ, ಆ ಗವಿಯಲ್ಲಿ ಪ್ರಸ್ತುತ ಬೇರೆ ಶರಣ–ಶರಣೆಯರ ಮೂರ್ತಿಯನ್ನು ಕಾನೂನುಬಾಹಿರವಾಗಿ ಹಾಗೂ ಸರ್ಕಾರ ಮತ್ತು ಸಂಬಂಧಿತ ಪ್ರಾಧಿಕಾರದ ಆದೇಶವನ್ನು ಮೀರಿ ಬಸವೇಶ್ವರ ದೇವಸ್ಥಾನದ ಪಂಚಕಮಿಟಿ ಸದಸ್ಯರು ಪ್ರತಿಷ್ಠಾಪಿಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಈ ಕ್ರಮವು ಹಡಪದ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ತಿಳಿಸಿದ್ದಾರೆ.ಹೀಗಾಗಿ, ಗವಿಯಲ್ಲಿ ಸ್ಥಾಪಿಸಿರುವ ಅನ್ಯ ಮೂರ್ತಿಯನ್ನು ತಕ್ಷಣ ತೆರವುಗೊಳಿಸಿ, ಶರಣ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಹಡಪದ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಸಂಬಂಧಿತ ವಿಷಯವನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿ, ನ್ಯಾಯಸಮ್ಮತ ಕ್ರಮ ಕೈಗೊಳ್ಳಬೇಕೆಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹಡಪದ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ, ಕಾರ್ಯದರ್ಶಿ ರಮೇಶ್ ಕವಲಗಾ, ವಿನೋದ ಅಂಬಲಗಾ, ಭಗವಂತ ಹಡಪದ ಕಿರಣಗಿ, ರಮೇಶ್ ಹಡಪದ ನಿಲೂರು, ಆಕಾಶ್ ತಳವಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button