ತಂದೆ–ತಾಯಿಗೆ ಪೂಜೆಯಲ್ಲ, ಪ್ರೀತಿ ಅಗತ್ಯ: ಡಾ. ಎಚ್.ಟಿ. ಪೋತೆ
ಜಮಾದಾರ ಕುಟುಂಬ ಪ್ರತಿಷ್ಠಾನದಿಂದ ಸ್ಮರಣೋತ್ಸವ ಕಾರ್ಯಕ್ರಮ

ಸಮಾರಂಭದಲ್ಲಿ ಎಸಿಪಿ ಶಿವನಗೌಡ ಸಿ. ಪಾಟೀಲ್, ಪಿಎಸ್ಐಗಳಾದ ಶಿವಲಿಂಗಪ್ಪ ಉಮ್ಮಣ್ಣಗೋಳ, ಭಾರತಿಬಾಯಿ ಧನ್ನಿ, ಎಎಸ್ಐ ಚಂದ್ರಾಮಪ್ಪ ಕುಂಬಾರ, ಮಹಿಳಾ ಪೇದೆ ಸಂತೋಷಮ್ಮ, ಮುಖ್ಯ ಪೇದೆಗಳಾದ ಮಲ್ಲಣ್ಣಗೌಡ ಮಾಲಿಪಾಟೀಲ್, ಷಣ್ಮುಖ ಮಾಂಡವೆ, ಸಂತೋಷ ನಾಯಿಕೋಡಿ, ಮಶಾಕ್ ಆರ್. ನದಾಫ್, ಗಡ್ಡೆಪ್ಪ ಕೋರೆ ಅವರಿಗೆ ಬೆಸ್ಟ್ ಪೊಲೀಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದರಂತೆ ಪತ್ರಕರ್ತರಾದ ಹಣಮಂತರಾವ ಭೈರಾಮಡಗಿ, ಪ್ರಭುಲಿಂದ ನೀಲೂರೆ, ಗುರುರಾಜ ಕುಲಕರ್ಣಿ, ಅಶೋಕ ದೊಡ್ಡಮನಿ, ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪುರಸ್ಕೃತರಾದ ಗೀತಾ ಹೊಸಮನಿ, ಪೊಲೀಸ್ ಕ್ರೀಡಾಪಟು ಭೀಮರಾವ ಜಾಧವ್ ಹಾಗೂ ಹೋಟೇಲ್ ಉದ್ಯಮಿ ಮಲ್ಲಿಕಾರ್ಜುನ ಬಿದನೂರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಲಬುರಗಿ:ತಂದೆ–ತಾಯಿಯನ್ನು ಆರಾಧಿಸುವುದಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು ಹಾಗೂ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ. ಎಚ್.ಟಿ. ಪೋತೆ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಮಾದಾರ ಕುಟುಂಬ ಪ್ರತಿಷ್ಠಾನವು ದಿ. ಮಲಕಪ್ಪ ಜಮಾದಾರ (ನಿವೃತ್ತ ಪೊಲೀಸ್ ಅಧಿಕಾರಿ) ಅವರ ದ್ವಿತೀಯ ಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ಬೆಸ್ಟ್ ಪೊಲೀಸ್ ಪ್ರಶಸ್ತಿ, ಪತ್ರಕರ್ತರಿಗೆ ವಿಶೇಷ ಸನ್ಮಾನ ಹಾಗೂ ಪೊಲೀಸ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ–ತಾಯಿಯನ್ನು ಬದುಕಿದ್ದಾಗ ಪ್ರೀತಿಸದೇ, ಅವರು ನಿಧನರಾದ ನಂತರ ಫೋಟೋಗೆ ಪೂಜೆ ಮಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಡಾ. ಪೋತೆ, ಶಿಕ್ಷಣ ನೀಡಿ ಬೆಳೆಸಿದ ತಂದೆ–ತಾಯಿಗೆ ನಾವು ಶಿಕ್ಷಣ ಪಡೆದ ನಂತರ ಏನು ಮಾಡುತ್ತಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ ಅಗತ್ಯವಿದೆ ಎಂದರು. ಸುಶಿಕ್ಷಿತರೇ ತಮ್ಮ ಹೆತ್ತವರನ್ನು ಬೀದಿಪಾಲು ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನಾವು ಮಾಡುವ ತಪ್ಪುಗಳನ್ನು ನಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಅನುಸರಿಸಬಹುದು ಎಂಬ ಅರಿವು ಎಲ್ಲರಲ್ಲೂ ಮೂಡಬೇಕು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ನಾವು ಹೆಂಡತಿ ಮತ್ತು ಮಕ್ಕಳ ವಲಯಕ್ಕೆ ಮಾತ್ರ ಸೀಮಿತವಾಗುತ್ತಿದ್ದೇವೆ. ಇದರಾಚೆ ಜನ್ಮ ನೀಡಿದವರನ್ನು ಹಾಗೂ ಒಡಹುಟ್ಟಿದವರನ್ನು ಗೌರವಿಸುವ, ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲರೂ ಒಗ್ಗಟ್ಟಾಗಿದ್ದಾಗಲೇ ಕುಟುಂಬಕ್ಕೆ ಮತ್ತು ಜೀವನಕ್ಕೆ ಅರ್ಥ ಸಿಗುತ್ತದೆ ಎಂದು ಡಾ. ಪೋತೆ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಅವರು ಬೆಸ್ಟ್ ಪೊಲೀಸ್ ಪ್ರಶಸ್ತಿ ವಿತರಿಸಿ ಮಾತನಾಡಿ, ಮಕ್ಕಳಿಗೆ ಪ್ರೀತಿ ಮಾಡಬೇಕು. ಆದರೆ ಅವರನ್ನು ಕೇವಲ ತಮ್ಮ ಮಕ್ಕಳಾಗಿ ಅಲ್ಲ, ಸಮಾಜದ ಆಸ್ತಿಯನ್ನಾಗಿ ಬೆಳೆಸಬೇಕು. ಮಕ್ಕಳಿಗೆ ಕಷ್ಟದ ಅರ್ಥವನ್ನು ತಿಳಿಸಿದರೆ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಬರಲಿದೆ ಎಂದು ಹೇಳಿದರು. ಸಮಾಜದ ಎಲ್ಲ ವೃತ್ತಿಗಳಲ್ಲಿಯೂ ಸಜ್ಜನರಿಂದ ಮಾತ್ರ ಬದಲಾವಣೆ ಸಾಧ್ಯ. ನಡೆ–ನುಡಿ ಒಂದಾಗಿರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಪಮಾ ರಮೇಶ್ ಕಮಕನೂರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಉಪಾಧ್ಯಕ್ಷ ಡಾ. ಶಿವರಂಜನ್ ಸತ್ಯಂಪೇಟೆ, ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಯುವ ಮುಖಂಡ ಶಿವಕುಮಾರ ಹೊನಗುಂಟಿ, ಪತ್ರಕರ್ತ ಚಂದ್ರಶೇಖರ ಕೌಲಗಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಮಾದಾರ ಕುಟುಂಬ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಪತ್ರಕರ್ತ ಸೂರ್ಯಕಾಂತ ಜಮಾದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ತಂದೆ ಮಲಕಪ್ಪ ಜಮಾದಾರ ಅವರ ನಡೆ–ನುಡಿ ಒಂದಾಗಿದ್ದು, ಆದರ್ಶ ಮೌಲ್ಯಗಳನ್ನು ಕಲಿಸಿ ಉತ್ತಮ ಬದುಕು ನೀಡಿದ್ದರು ಎಂದು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಪೊಲೀಸ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಮೇಶ್ ಜಮಾದಾರ, ಸಂಜೀವಕುಮಾರ ಕಾಂಬಳೆ, ಪಂಚಾಕ್ಷರಿ ಜಮಾದಾರ, ಶರಣಗೌಡ ಪಾಟೀಲ್, ಸುಭಾಷ ಆಲೂರ, ನಾಗಶೆಟ್ಟಿ ಡಾಕುಳಗಿ, ಪ್ರಕಾಶ ಉಡಚಣ, ಮಲ್ಲಣ್ಣ ಯಂಕಂಚಿ, ಸುರೇಶ್ ಲೇಂಗಟಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಜಿ.ಎಂ. ಪಾಟೀಲ್ ಪ್ರಾರ್ಥನೆ ಗೀತೆ ಹಾಡಿದರು. ಶಿವಾನಂದ ಅಣಜಗಿ ನಿರೂಪಿಸಿದರು.



