ಹಿಂಗಾರು ಬೆಳೆಗಳ ಸಮೀಕ್ಷೆ ನಡೆಸಿ ಪಹಣಿಯಲ್ಲಿ ನೋಂದಣಿ ಮಾಡಲಿ – ರೈತ ಸಂಘ ಆಗ್ರಹ

ಜೇವರ್ಗಿ: ಹಿಂಗಾರು ಬೆಳೆಗಳ ಸಮೀಕ್ಷೆಯನ್ನು ತಕ್ಷಣ ನಡೆಸಿ ರೈತರ ಪಹಣಿಯಲ್ಲಿ ಕೂಡಲೇ ನೋಂದಣಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಲ್ಯಾಣ ಕರ್ನಾಟಕ ವಿಭಾಗದ ಸಂಚಾಲಕರಾದ ರಾಜಶೇಖರ ಚವಡಿ ಅವರು ಆಗ್ರಹಿಸಿದರು.
ಈ ಕುರಿತು ಜೇವರ್ಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ ಮುಂಗಾರು ಬೆಳೆಗಳು ಅತಿಯಾದ ಮಳೆಯಿಂದ ಸಂಪೂರ್ಣವಾಗಿ ನಾಶವಾಗಿವೆ. ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರು ಈಗ ತಮ್ಮ ಜಮೀನಿನಲ್ಲಿ ಹಿಂಗಾರು ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಆದರೆ ಹಿಂಗಾರು ಬೆಳೆಗಳ ಸಮೀಕ್ಷೆ ನಡೆಸಿ ಪಹಣಿಯಲ್ಲಿ ನೋಂದಣಿ ಮಾಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ವಿಳಂಬದಿಂದ ರೈತರು ಸರ್ಕಾರದಿಂದ ದೊರೆಯಬೇಕಾದ ವಿವಿಧ ಸೌಲಭ್ಯಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಯಾವುದೇ ವಿಳಂಬವಿಲ್ಲದೆ ಹಿಂಗಾರು ಬೆಳೆಗಳ ಸಮೀಕ್ಷೆ ನಡೆಸಿ ಪಹಣಿಯಲ್ಲಿ ನೋಂದಣಿ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಸಮೀಕ್ಷೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷಗೌಡ ಮಾಲಿ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ರಮೇಶ ಹವಲ್ದಾರ, ಸಂಚಾಲಕ ವಿಶ್ವನಾಥ ದೊರೆ, ಜೇವರ್ಗಿ ತಾಲೂಕ ಖಜಾಂಚಿ ಮಲ್ಲಣ್ಣಗೌಡ ಹಳ್ಳಿ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.



