ಕಲಬುರಗಿಜಿಲ್ಲಾಸುದ್ದಿ
ಜೇವರ್ಗಿಯಲ್ಲಿ ಅಕ್ರಮ ನಾಡ ಪಿಸ್ತೂಲ್ಧಾರಿ ಬಂಧನ: ರಾಜಸ್ಥಾನದಿಂದ ತಂದ ಶಸ್ತ್ರಾಸ್ತ್ರ ವಶ

ಕಲಬುರಗಿ:ಅಕ್ರಮವಾಗಿ ನಾಡ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯೋರ್ವನನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ. ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮದ ಅಶೋಕ್ ಯಮನಯ್ಯ ಗುತ್ತೇದಾರ್ (30) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ಒಂದು ನಾಡ ಪಿಸ್ತೂಲ್ ಹಾಗೂ ಮೂರು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಶೋಕ್ ರಾಜಸ್ಥಾನದಿಂದ ನಾಡ ಪಿಸ್ತೂಲನ್ನು ಅಕ್ರಮವಾಗಿ ತರಿಸಿ ತನ್ನ ಬಳಿ ಇಟ್ಟುಕೊಂಡಿದ್ದನು ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
ಕೆಲ ದಿನಗಳ ಹಿಂದೆ ಆರೋಪಿ ತನ್ನ ಸ್ನೇಹಿತರ ಮುಂದೆ ಪಿಸ್ತೂಲ್ ಪ್ರದರ್ಶಿಸಿದ್ದಾನೆ ಎನ್ನಲಾಗಿದ್ದು, ಈ ಕುರಿತು ಖಚಿತ ಮಾಹಿತಿ ಪಡೆದ ಜೇವರ್ಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



