ಕಲಬುರಗಿಜಿಲ್ಲಾಸುದ್ದಿ

ಕಳಪೆ ಗುಣಮಟ್ಟದ ಶೌಚಾಲಯ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಜೈ ಕನ್ನಡಿಗರ ಸೇನೆ ಆಗ್ರಹ

ಕಲಬುರಗಿ: ಕಲಬುರಗಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಶೌಚಾಲಯಗಳ ಕಾಮಗಾರಿಗಳು ಕಳಪೆಮಟ್ಟದಿಂದ ಕೂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೈ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ದತ್ತು ಹೆಚ್. ಬಾಸಗಿ ಅವರ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ನಗರದ ಹನುಮಾನ ನಗರ, ದರ್ಬಾರ್ ಹೋಟೆಲ್ ಹತ್ತಿರ, ಜೇವರ್ಗಿ ಕ್ರಾಸ್ ಸೇರಿದಂತೆ ಒಟ್ಟು 8 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಈ ಎಲ್ಲಾ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಒಳಭಾಗದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಕೈಗೊಳ್ಳದೇ ಶೌಚಾಲಯ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂಬುದೂ ಗಂಭೀರ ಆರೋಪವಾಗಿದೆ.

ಒಂದು ಶೌಚಾಲಯ ನಿರ್ಮಾಣಕ್ಕೆ ರೂ.30 ಲಕ್ಷ ಅನುದಾನ ನಿಗದಿಯಾಗಿದ್ದರೂ, ಆ ಮೊತ್ತಕ್ಕೆ ತಕ್ಕ ಮಟ್ಟದ ಕಾಮಗಾರಿ ನಡೆದಿಲ್ಲ. ಅಲ್ಲದೆ ಶೌಚಾಲಯಗಳಿಗೆ ಅಗತ್ಯವಾದ ಯು.ಜಿ.ಡಿ. ಸಂಪರ್ಕವನ್ನೂ ನೀಡಲಾಗಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅನುದಾನ ಮಂಜೂರಾಗಿರುವುದರಿಂದ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಶೌಚಾಲಯಗಳ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಜೊತೆಗೆ ಅಪೂರ್ಣ ಹಾಗೂ ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ಲೈಸೆನ್ಸ್ ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಒಂದು ವಾರದೊಳಗಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಮಹಾನಗರ ಪಾಲಿಕೆ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಜಗತ್‌ಸಿಂಗ್, ಸೋನುಸಿಂಗ್, ಸಾಗರ್ ಹಡಲಗಿ, ಸಿದ್ದು ಕಡಬೂರ, ಹುಸೇನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button