ಜಿಲ್ಲಾಸುದ್ದಿಯಾದಗಿರಿ

ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಕೊರತೆ: ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

5 ದಿನದಲ್ಲಿ ಸ್ಪಂದಿಸದಿದ್ದರೆ ಜ.26ರಂದು ಕಪ್ಪು ಪಟ್ಟಿ ಪ್ರದರ್ಶನ

ಯಾದಗಿರಿ: ಜಿಲ್ಲೆಯಾದ್ಯಂತ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಲವು ಬಾರಿ ವಿನೂತನ ಪ್ರತಿಭಟನೆಗಳು ಹಾಗೂ ಮನವಿಗಳನ್ನು ಸಲ್ಲಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.

ಜಿಲ್ಲೆಯ ಟೋಕಾಪೂರ, ಪಸಪೂಲ, ನವಬುರ್ಜ, ರಾಂಪೂರ (ಕೆ), ಮಸ್ಕನಳ್ಳಿ, ಗುಂಡ್ಲೂರು, ಶಿವಪೂರ, ಕೊಂಗಡಿ, ಗೊಂದೆನೂರ, ಹುಂಡೇಕಲ್, ಅಬ್ಬೆತುಮಕೂರು, ದೊಡ್ಡ ತಾಂತಾ (ಭೀಮನಗರ), ನೀಲಹಳ್ಳಿ, ಹಾಲಗೇರಾ, ಅರ್ಜುಣಿಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಕಸ ವಿಲೇವಾರಿ ವ್ಯವಸ್ಥೆ, ಸೊಳ್ಳೆ ನಿಯಂತ್ರಣಕ್ಕಾಗಿ ಬ್ಲಿಚಿಂಗ್ ಪೌಡರ್ ಸಿಂಪಡಣೆ, ಸಾಯಂಕಾಲ ಫಾಗಿಂಗ್ ವ್ಯವಸ್ಥೆ, ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯಿದೆ ಎಂದು ಅವರು ದೂರಿದರು.

ಈ ಕುರಿತು ಐದು ದಿನಗಳೊಳಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟ ಕ್ರಮ ಕೈಗೊಳ್ಳದಿದ್ದಲ್ಲಿ, ಜನವರಿ 26ರ ಗಣರಾಜ್ಯೋತ್ಸವದಂದು ಜಿಲ್ಲಾಡಳಿತದ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸ್ವಾತಂತ್ರ್ಯ ದೊರೆತು 78 ವರ್ಷಗಳಾದರೂ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ ಮುಂದುವರಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಆಕ್ರೋಶ ವ್ಯಕ್ತಪಡಿಸಿದರು. ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಜಾರಿಕೊಳ್ಳುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಜಿಲ್ಲಾಡಳಿತ ಭವನದಲ್ಲೇ ಸಂಘಟನೆಗಾರರೊಂದಿಗೆ ಸಭೆ ಕರೆದು ಸತ್ಯಾಂಶವನ್ನು ಬಹಿರಂಗಪಡಿಸಬೇಕೆಂದು ಅವರು ಒತ್ತಾಯಿಸಿದರು.

ನಗರಗಳಲ್ಲಿ ಕುಳಿತು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಕೈಜೋಡಿಸಿ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗೋವಿಂದ್ ರಾಜ್, ಪವನ, ಮಹೀಬೂಬ್ ಸಾಹುಕಾರ್, ಅಬ್ದುಲ್ ಸಾಬ್, ಖಾಜಾ ಹುಸೇನ್, ಪ್ರಜ್ವಲ್, ಶಿವರಾಜ್, ತಾಯಪ್ಪ, ಮಹ್ಮದ್ ರಫಿಕ್, ನಿಂಗಪ್ಪ, ಬಸಲಿಂಗಪ್ಪ, ಮಲ್ಲೇಶ್, ಅಮತಪ್ಪ, ಪ್ರಭು, ನಾಗರಾಜ್, ಹನುಮಂತ, ಶ್ರೀನಿವಾಸ್, ಶಿವಕುಮಾರ, ದೊಡ್ಡಯ್ಯ, ರಮೇಶ್, ಹನುಮಂತರಾಯ, ಶರಣು, ಪಿಡ್ಡಪ್ಪ ನಾಯಕ್, ತಿಪ್ಪಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button