ಜಿಲ್ಲಾಸುದ್ದಿಯಾದಗಿರಿ

ಮಾತೃ ವಂದನಾ ಹಾಗೂ ಎಸ್ ಎಸ್ ಎಲ್ ಸಿ ” ವಿದ್ಯಾರ್ಥಿಗಳಿಗೆ ಬೀಳ್ಕೊಡಗೆ ಸಮಾರಂಭ

ಕೆಂಭಾವಿ: ಪಟ್ಟಣದ ಶ್ರೀ ಮಹಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ “ಮಾತೃ ವಂದನಾ” ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಭಾವಪೂರ್ಣ ಬೀಳ್ಕೊಡಗೆ ಸಮಾರಂಭ ವಿಜೃಂಭಣೆ ಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಟ್ಟಣದ ಸಾಹಿತಿ ಹಳ್ಳೆರಾವ್ ಕುಲಕರ್ಣಿ ಅವರು, “ಮಾತೃ ವಂದನಾ ಕಾರ್ಯಕ್ರಮವು ಶಾಲೆಗಳಲ್ಲಿ ಆಯೋಜಿಸುವ ಒಂದು ಸಾಂಸ್ಕೃತಿಕ-ಭಾವನಾತ್ಮಕ ಸಮಾರಂಭವಾಗಿದ್ದು, ಇದು ತಂದೆ-ತಾಯಂದಿರ ಸಾಮಾನ್ಯ ಗೌರವಕ್ಕೆ ಮೀಸಲಾದ ವಿಶೇಷ ಆಚರಣೆ. ವಿದ್ಯಾರ್ಥಿಗಳು ತಮ್ಮ ತಾಯಿಯ ತ್ಯಾಗವನ್ನು ಅರಿತು ಗೌರವಿಸುವುದು ಅವರ ವ್ಯಕ್ತಿತ್ವ ನಿರ್ಮಾಣಕ್ಕೆ ಮಹತ್ವದ್ದಾಗಿದೆ” ಎಂದು ಹೇಳಿದರು.

ಇಂದಿನ ಯುಗದಲ್ಲಿ ಮಕ್ಕಳು ಮೊದಲು ಸಂಸ್ಕಾರವನ್ನು ಕಲಿಯಬೇಕು. ಗುರುಹಿರಿಯರನ್ನು ಗೌರವಿಸಿ, ಶಿಸ್ತು, ಸಮಯಪಾಲನೆ ಹಾಗೂ ಪ್ರಜ್ಞೆಯೊಂದಿಗೆ ನಡೆದು ಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ. ಸತ್ಯ ಮತ್ತು ನಿಷ್ಠೆ ಜೀವನದ ಮೂಲ ತತ್ವಗಳು; ಸತ್ಯದ ಹಾದಿಯಲ್ಲಿ ನಡೆದರೆ ಅದು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.

ಸಿಆರ್‌ಪಿ ಬಂದೇನವವಾಜ ನಾಲತವಾಡ ಮಾತನಾಡಿ, “ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒತ್ತಡದ ನಡುವೆಯೂ ನೀವು ಸಾಧಿಸಿರುವುದು ಶ್ಲಾಘನೀಯ. ಆದರೆ ಇದು ಅಂತ್ಯವಲ್ಲ, ಹೊಸ ಯಾತ್ರೆಯ ಆರಂಭ. ಶಿಸ್ತು ಮತ್ತು ಶ್ರಮವೇ ಯಶಸ್ಸಿನ ಗುಟ್ಟು. ಯಶಸ್ಸು ಒಂದೇ ರಾತ್ರಿಯಲ್ಲಿ ಸಿಗುವುದಿಲ್ಲ; ದೈನಂದಿನ ಪರಿಶ್ರಮವೇ ದೊಡ್ಡ ಗುರಿಗಳಿಗೆ ದಾರಿ ಮಾಡುತ್ತದೆ” ಎಂದು ತಿಳಿಸಿದರು.

ತಾಯಿ-ತಂದೆಯರ ತ್ಯಾಗವನ್ನು ಸದಾ ನೆನಪಿಟ್ಟುಕೊಂಡು ಅವರ ಕನಸುಗಳನ್ನು ನನಸಾಗಿಸಬೇಕು. ಊರು, ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತರುವಂತೆ ಸಾಧನೆ ಮಾಡಬೇಕು ಎಂದು ಅವರು ಹೇಳಿದರು.

ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಗಳಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಭವಿಷ್ಯದಲ್ಲಿ ಉತ್ತಮ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡು ದೇಶಕ್ಕೆ ಸೇವೆ ಸಲ್ಲಿಸಿ, ತಂದೆ-ತಾಯಿಯ ಗೌರವ ಹೆಚ್ಚಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಅತಿಥಿಯಾಗಿ ಡಿ.ಸಿ. ಪಾಟೀಲ್ ಮಾತನಾಡಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಷಟಸ್ಥಲ ಬ್ರಹ್ಮ ಚನ್ನಬಸವ ಶಿವಾಚಾರ್ಯರು (ಕೆಂಭಾವಿ ಹಿರೇಮಠ) ಹಾಗೂ ಷಟಸ್ಥಲ ಬ್ರಹ್ಮ ಶ್ರೀ ಸೂಗುರೇಶ್ವರ ಶಿವಾಚಾರ್ಯರು ಅವರು ಆಶೀರ್ವಚನ ನೀಡಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕೋರಿದರು.

ಈ ಸಂದರ್ಭದಲ್ಲಿ ರಾಮನ್ಗೌಡ, ಹಳ್ಳಪ್ಪಗೌಡ, ಮೋಹನ ರೆಡ್ಡಿ ಡಿಗ್ಗಾವಿ, ರಾಜಶೇಖರಯ್ಯ ಹಿರೇಮಠ, ವೀರಣ್ಣ ಕಲಕೇರಿ, ಗುರು ಕುಂಬಾರ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಊರಿನ ಪ್ರಮುಖರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button