ಬೀದಿ ನಾಯಿಗಳ ಹಾವಳಿ ತಗ್ಗಿಸಲು ಪುರಸಭೆಯ ಭರ್ಜರಿ ಕಾರ್ಯಾಚರಣೆ

ಕೆಂಭಾವಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಮಿತಿಮೀರಿದ್ದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಸಾರ್ವಜನಿಕರ ನಿರಂತರ ದೂರುಗಳ ಮೇರೆಗೆ ಪುರಸಭೆ ಆಡಳಿತ ಶುಕ್ರವಾರ ಭರ್ಜರಿ ಕಾರ್ಯಾಚರಣೆ ನಡೆಸಿತು.
ಕಳೆದ ಕೆಲವು ತಿಂಗಳಿಂದ ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಅನೇಕ ಅಪಘಾತಗಳು ಸಂಭವಿಸಿದ್ದವು. ಶಾಲಾ ಮಕ್ಕಳು, ಪಾದಚಾರಿಗಳು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಇದು ತೀವ್ರ ತಲೆನೋವಾಗಿ ಪರಿಣಮಿಸಿತ್ತು.
ಈ ಕುರಿತು ಸಾರ್ವಜನಿಕರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪುರಸಭೆ ಆಡಳಿತ, ಪರಿಣಿತರ ತಂಡದೊಂದಿಗೆ ಪಟ್ಟಣದ ಮಾರುಕಟ್ಟೆ ಪ್ರದೇಶ, ಬಸ್ ನಿಲ್ದಾಣ ಹಾಗೂ ಮುಖ್ಯ ಬಜಾರ್ ರಸ್ತೆಗಳಲ್ಲಿ ಬೀಡುಬಿಟ್ಟಿದ್ದ ನಾಯಿಗಳನ್ನು ಜಾಲ ಬೀಸಿ ಸೆರೆಹಿಡಿಯುವ ಕಾರ್ಯಾಚರಣೆ ನಡೆಸಿತು.
ಕಾರ್ಯಾಚರಣೆ ವೇಳೆ ಹಲವು ನಾಯಿಗಳನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸಲಾಯಿತು.ಸೆರೆಹಿಡಿದ ನಾಯಿಗಳನ್ನು ಸುರಕ್ಷಿತ ಕೇಂದ್ರಕ್ಕೆ ಕೊಂಡೊಯ್ಯಲಾಗಿದ್ದು, ಅವುಗಳಿಗೆ ಸಂತಾನಶಕ್ತಿ ಹರಣ (ಸ್ಟೆರಿಲೈಸೇಶನ್) ಚಿಕಿತ್ಸೆ ಹಾಗೂ ರೇಬೀಸ್ ನಿರೋಧಕ ಲಸಿಕೆ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.ಹಂತ ಹಂತವಾಗಿ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲೂ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾರ್ಯಾಚರಣೆ ವೇಳೆ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಾರ್ವಜನಿಕರು ಪುರಸಭೆಯ ಈ ಕ್ರಮವನ್ನು ಸ್ವಾಗತಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿ ಎಂದು ಆಶಿಸಿದ್ದಾರೆ.



