ಒಳಮೀಸಲಾತಿಯಲ್ಲಿ 59 ಅಲೆಮಾರಿ ಜಾತಿಗಳಿಗೆ ಅನ್ಯಾಯ ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ

ಯಾದಗಿರಿ: ಒಳಮೀಸಲಾತಿಯಲ್ಲಿ 59 ಅಲೆಮಾರಿ ಜಾತಿಗಳಿಗೆ ಅನ್ಯಾಯ ನಡೆದಿದೆ ಎಂಬ ಆಕ್ರೋಶ ವ್ಯಕ್ತಪಡಿಸಿ, ಅದನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಲು 59 ಸಂಘಟನೆಗಳ ಮುಖಂಡರು ನವದೆಹಲಿಯ ಜಂತರ್ ಮಂತರ್ ಬಳಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಬಾರದಿರುವುದನ್ನು ಖಂಡಿಸಿ, ನಾಯಕರು ಎಐಸಿಸಿ ಕಚೇರಿಗೆ ಮುತ್ತಿಗೆ ಹಾಕಲು ತೆರಳಿದರು. ನಂತರ ಸ್ಥಳಕ್ಕೆ ಬಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವರ ಮನವಿಯನ್ನು ಸ್ವೀಕರಿಸಿ ಭರವಸೆ ನೀಡಿದರು.
ದೆಹಲಿಯ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಸಣ್ಣಮಾರೆಪ್ಪ ಹೊಸಪೇಟೆ, ರಾಜ್ಯ ಕಾರ್ಯದರ್ಶಿ ಶಿವರಾಜ ರುದ್ರಾಕ್ಷಿ, ರಾಜ್ಯ ಉಪಾಧ್ಯಕ್ಷ ಮಾರುತಿ ಸಿರವಾಟಿ (ಚಿತ್ತಾಪುರ), ಅಲೆಮಾರಿ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಭೀಮರಾಯ ಒಂಟೆತ್ತಿನವರು, ಬುಡಗ ಜಂಗಮ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ಪಂಡಿತ್ ಸಿರವಾಟಿ (ಚಿತ್ತಾಪುರ), ಸುಡುಗಾಡು ಸಿದ್ದರ ಸಂಘಟನಾ ಕಾರ್ಯದರ್ಶಿ ರಾಜಪ್ಪ ದೊಡ್ಡಮನಿ, ಬಸವರಾಜ ಶಹಾಪುರ, ಯಂಕಪ್ಪ ಶಹಾಪುರ, ಹಣಮಂತ ಶಹಾಪುರ, ಚಂದಪ್ಪ ಶಳ್ಳಗಿ, ಮಾರುತಿ ಮಾಳನೂರು, ಹಣಮಂತ ಸೀತನೂರು, ಕೃಷ್ಣ ದೇವಸೂಗೂರ, ರಮೇಶ ವೀಭೂತಿ, ನಿಂಗಪ್ಪ ರಾಮತೀರ್ಥ, ಮರಿಲಿಂಗಪ್ಪ ಕಲಬುರಗಿ, ಮಹಾಂತೇಶ ಕಲಬುರಗಿ, ಶಿವಾನಂದ ಕಲಬುರಗಿ, ಯಲ್ಲಪ್ಪ ಕಲಬುರಗಿ ಸೇರಿದಂತೆ ಯಾದಗಿರಿ-ಕಲಬುರಗಿಯಿಂದ ಸುಮಾರು 70 ಮಂದಿ ತೆರಳಿ ಪಾಲ್ಗೊಂಡರು.
ಎಚ್ಚರಿಕೆ: ಮುಂಬರುವ 15 ದಿನಗಳೊಳಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಅಲೆಮಾರಿಗಳ ವೇಷಭೂಷಣಗಳೊಂದಿಗೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಬುಡಗ ಜಂಗಮ ಸಂಘಟನೆಯ ಜಿಲ್ಲಾಧ್ಯಕ್ಷ ಶಂಕರ ಶಾಸ್ತಿ ತಿಳಿಸಿದರು.