ಕ್ರಿಶ್ಚಿಯನ್ ನಿಗಮಕ್ಕೆ ಜಿಲ್ಲಾ ಮಟ್ಟದಲ್ಲಿ ಕಚೇರಿಗಳ ಸ್ಥಾಪಿಸಲು ಮನವಿ

ಕಲಬುರಗಿ : ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ಅಧಿಕೃತವಾಗಿ ಸ್ಥಾಪನೆಯಾದ ಹಿನ್ನೆಲೆಯಲ್ಲಿ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಿಗಮದ ಕಚೇರಿಗಳನ್ನು ಸ್ಥಾಪಿಸಿ, ಅಧಿಕಾರಿಗಳನ್ನು ನಿಯೋಜಿಸ ಬೇಕು ಹಾಗೂ ಜಿಲ್ಲಾ ಸಮಿತಿಗಳನ್ನು ರಚಿಸಬೇಕೆಂದು ಅಖಿಲ ಭಾರತ ಕ್ರಿಶ್ಚಿಯನ್ ಮಹಾಸಭಾ ಕಲ್ಯಾಣ ಕರ್ನಾಟಕ ಘಟಕ ವತಿಯಿಂದ ಕೆ.ಎಂ.ಡಿ.ಸಿ. ಜಿಲ್ಲಾ ಅಧಿಕಾರಿಗಳ ಇವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಲ್ಪಸಂಖ್ಯಾತ ಇಲಾಖೆಯ ಉಸ್ತುವರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಅ.17 ರಂದು ನಿಗಮದ ಅಧಿಕೃತ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ, ರಾಜ್ಯದಾದ್ಯಂತ ಕ್ರಿಶ್ಚಿಯನ್ ಸಂಘಟನೆಗಳು ಸಂತೋಷ ವ್ಯಕ್ತಪಡಿಸಿವೆ.
ಸಮುದಾಯದ ನಾಯಕರ ಪ್ರಕಾರ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ರೂಪಿಸಲಾಗಿರುವ ಯೋಜನೆಗಳು ತಲುಪಬೇಕಾದರೆ ಪ್ರತಿ ಜಿಲ್ಲೆ ಮಟ್ಟದಲ್ಲಿ ಶೀಘ್ರ ಕಚೇರಿ ಸ್ಥಾಪನೆ ಮತ್ತು ಅಧಿಕಾರಿಗಳ ನೇಮಕ ಅಗತ್ಯವಾಗಿದೆ.
ಅದೇ ವೇಳೆ, ಸಮುದಾಯದ ಹಿತದೃಷ್ಟಿಯಿಂದ ಜಾತಿ ಆಧಾರಿತ ಯೋಜನೆಗಳು ರೂಪಿಸಿ, ಎಲ್ಲ ಕ್ರಿಶ್ಚಿಯನ್ ವರ್ಗದ ಜನತೆಗೆ ನಿಗಮದ ಸೌಲಭ್ಯಗಳು ಸಮಾನವಾಗಿ ದೊರಕುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಕ್ರಿಶ್ಚಿಯನ್ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಸಂಧ್ಯಾರಾಜ್ ಸ್ಯಾಮ್ಯೂವೆಲ್, ಮುಖಂಡರು ಸೀಮಿಯೋನ್ ಸ್ಯಾಮ್ಯುವೆಲ್, ಪ್ರಮೋದಕುಮಾರ ಉಪಸ್ಥಿತರಿದ್ದರು.