ಕಲಬುರಗಿಜಿಲ್ಲಾಸುದ್ದಿ

ಸಾಮಾಜಿಕ ನ್ಯಾಯದ ಹೋರಾಟಕ್ಕೆ ಸಾವಿತ್ರಿಬಾಯಿ ಫುಲೆ ಪ್ರೇರಣೆ – ಶಿವಲಿಂಗಪ್ಪ ಕಿನ್ನೂರ್

“ಜ್ಯೋತಿಬಾ ಫುಲೆ ಅವರು ಸಾವಿತ್ರಿಬಾಯಿ ಫುಲೆ ಅವರಿಗೆ ಮೊದಲು ಮನೆಯಲ್ಲಿ ಶಿಕ್ಷಣ ನೀಡುವ ಮೂಲಕ ಮಹಿಳಾ ಶಿಕ್ಷಣದ ಕ್ರಾಂತಿಗೆ ನಾಂದಿ ಹಾಡಿದರು. ಸಮಾಜದಿಂದ ಎದುರಾದ ಅವಮಾನ, ಹಿಂಸೆ ಹಾಗೂ ವಿರೋಧಗಳನ್ನು ಧೈರ್ಯದಿಂದ ಎದುರಿಸಿ, ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರು ಮತ್ತು ಶೋಷಿತ ವರ್ಗಗಳಿಗೆ ಶಿಕ್ಷಣದ ಬೆಳಕು ತಲುಪಿಸಿದರು. ಅಕ್ಷರದ ಮಾತೆಯಾದ ಸಾವಿತ್ರಿಬಾಯಿ ಫುಲೆ ಅವರ ಹೋರಾಟ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ.” – ಸಿದ್ದರಾಜ ಕಿನ್ನೂರ, ಮಾಜಿ ಆರ್‌ಎಸ್‌ಪಿ ಪಕ್ಷದ ರಾಜ್ಯ ಉಸ್ತುವಾರಿಗಳು.

ಕಲಬುರಗಿ: ಮಾತೆ ಸಾವಿತ್ರಿಬಾಯಿ ಫುಲೆ ಅವರು ಸಾಮಾಜಿಕ ನ್ಯಾಯ, ಮಹಿಳಾ ಶಿಕ್ಷಣ ಮತ್ತು ಶೋಷಿತ ಸಮುದಾಯಗಳ ಹಕ್ಕುಗಳ ಹೋರಾಟಕ್ಕೆ ಅಪಾರ ಪ್ರೇರಣೆಯಾಗಿದ್ದಾರೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್ ಹೇಳಿದರು.

ರಾಷ್ಟ್ರೀಯ ಸಮಾಜ ಪಕ್ಷದ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಇಂದು ಪಕ್ಷದ ಕಚೇರಿಯಲ್ಲಿ ರಾಷ್ಟ್ರ ಮಾತೆ ಸಾವಿತ್ರಿಬಾಯಿ ಜ್ಯೋತಿಬಾ ಫುಲೆ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವಲಿಂಗಪ್ಪ ಕಿನ್ನೂರ್, ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣ ಹಾಗೂ ಸಾಮಾಜಿಕ ಸಮಾನತೆಯ ಹೋರಾಟದಲ್ಲಿ ಸಲ್ಲಿಸಿದ ಅನನ್ಯ ಕೊಡುಗೆಗಳನ್ನು ಸ್ಮರಿಸಿದರು. ಅವರ ಜೀವನ ಚರಿತ್ರೆಯನ್ನು ಜನಸಾಮಾನ್ಯರಲ್ಲಿ, ವಿಶೇಷವಾಗಿ ಯುವಪೀಳಿಗೆ ಯಲ್ಲಿ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಶಕ್ತಿಗೆ ತಕ್ಕಂತೆ ‘ಅಳಿಲು ಸೇವೆ’ ಸಲ್ಲಿಸುವ ಮೂಲಕ ಸಾಮಾಜಿಕ ಪರಿವರ್ತನೆಯ ಹೋರಾಟದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಶರಣಪ್ಪ ದೊಡ್ಡಮನಿ, ಸಾವಿತ್ರಿಬಾಯಿ ಫುಲೆ ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ದಿಕ್ಕು ತೋರಿಸುವಂತಿದ್ದು, ಶಿಕ್ಷಣವೇ ಶೋಷಿತ ಸಮುದಾಯಗಳ ಮುಕ್ತಿ ಎಂಬ ಸಂದೇಶವನ್ನು ಅವರು ಜೀವನಪೂರ್ತಿ ಸಾರಿದರೆಂದು ಹೇಳಿದರು.
ಯುವ ಘಟಕದ ರಾಜ್ಯಾಧ್ಯಕ್ಷರಾದ ದೇವೇಂದ್ರ ಕ್ಯಾಸಪಳ್ಳಿ ಹಾಗೂ ಪಕ್ಷದ ಉಸ್ತುವಾರಿಗಳಾದ ಸಿದ್ದರಾಜ್ ಕಿನ್ನೂರ್ ಮಾತನಾಡಿ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೈಕ್ಷಣಿಕ ಕ್ರಾಂತಿಗೆ ಸಾವಿತ್ರಿಬಾಯಿ ಫುಲೆ ಅವರ ಹೋರಾಟ ಇಂದಿಗೂ ಪ್ರೇರಣೆಯಾಗಿದ್ದು, ಆ ಮೌಲ್ಯಗಳನ್ನು ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮಂತ ಮಾವನೂರ್ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು, ಫುಲೆ ದಂಪತಿಯ ಆದರ್ಶಗಳು ಸಮಾಜದ ಬೇರುಮಟ್ಟದವರೆಗೂ ತಲುಪುವಂತೆ ಕಾರ್ಯಕರ್ತರು ಶ್ರಮಿಸಬೇಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜೇವರ್ಗಿ ತಾಲೂಕಿನ ಅಧ್ಯಕ್ಷರಾದ ಮಾಂತೇಶ ಅವರಾದಿ, ಅಯ್ಯಣ್ಣ ಸಿಂದಗಿ, ಶಹಬಾದ್‌ನ ರಮೇಶ್, ಸೇಡಂ ಹಾಗೂ ಚಿತ್ತಾಪುರ ತಾಲೂಕುಗಳ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿ, ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸೂಚಿಸಿದರು.

Related Articles

Leave a Reply

Your email address will not be published. Required fields are marked *

Back to top button