ಜಿಲ್ಲಾಸುದ್ದಿಯಾದಗಿರಿ

ಜ್ಞಾನದೀಪ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ: ಆವಿಷ್ಕಾರವೇ ಆಧುನಿಕ ಶಿಕ್ಷಣದ ಗುರಿ – ಡಾ. ಭೋಗಪ್ಪ ಅಸ್ಕಿ

ಕೆಂಭಾವಿ: ಪಟ್ಟಣದ ಜ್ಞಾನದೀಪ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ ಹಾಗೂ ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಭೋಗಪ್ಪ ಅಸ್ಕಿ ಅವರು, “ವಿದ್ಯಾರ್ಥಿಗಳು ಆವಿಷ್ಕಾರದತ್ತ ಸಾಗುವುದು ಆಧುನಿಕ ಶಿಕ್ಷಣದ ಮುಖ್ಯ ಗುರಿ. ಇದರಿಂದ ಸೃಜನಶೀಲತೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ಆಯಾಮಗಳು ತೆರೆಯುತ್ತವೆ” ಎಂದು ಹೇಳಿದರು.

ವಿಜ್ಞಾನವು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗ ಬಾರದು. ಪ್ರತಿಯೊಂದು ಮಗುವಿನಲ್ಲೂ ಒಬ್ಬ ವಿಜ್ಞಾನಿ ಅಡಗಿದ್ದಾನೆ. ಪ್ರಶ್ನಿಸುವ ಮನೋಭಾವವೇ ವಿಜ್ಞಾನದ ಮೊದಲ ಹೆಜ್ಜೆ. ಇಂದಿನ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿರುವ ಮಾದರಿಗಳು ಅವರಲ್ಲಿರುವ ಕುತೂಹಲ ಹಾಗೂ ಸೃಜನಶೀಲತೆಗೆ ಸಾಕ್ಷಿಯಾಗಿದೆ ಎಂದು ಅವರು ಶ್ಲಾಘಿಸಿದರು.

ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ ತಳಕೇರಿ ಮಾತನಾಡಿ, “ಇಂದಿನ ಜಗತ್ತು ತಂತ್ರಜ್ಞಾನ ಆಧಾರಿತವಾಗಿದೆ. ವಿದ್ಯಾರ್ಥಿಗಳು ಕೇವಲ ಬಳಕೆದಾರರಾಗದೆ, ಹೊಸ ತಂತ್ರಜ್ಞಾನಗಳ ಆವಿಷ್ಕಾರಕರಾಗಬೇಕು. ಇಂತಹ ವಸ್ತುಪ್ರದರ್ಶನಗಳು ಮಕ್ಕಳಲ್ಲಿ ಹೊಸ ಆಲೋಚನೆಗಳನ್ನು ಹುಟ್ಟುಹಾಕುತ್ತವೆ” ಎಂದರು.

ನಾವು ಮಾಡುವ ಸಂಶೋಧನೆಗಳು ಕೇವಲ ಸೌಕ ರ್ಯಕ್ಕಾಗಿ ಇರದೆ, ಪರಿಸರ ಸಂರಕ್ಷಣೆಯತ್ತ ಕೇಂದ್ರೀಕರಿ ಸಬೇಕು. ಜಾಗತಿಕ ತಾಪಮಾನ ಏರಿಕೆ ಮತ್ತು ಮಾಲಿನ್ಯ ಸಮಸ್ಯೆಗಳಿಗೆ ವಿಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವತ್ತ ಮಕ್ಕಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಶಿಕ್ಷಣ ಪ್ರೇಮಿ ಭೀಮು ಡಿಗ್ಗಾವಿ ಉದ್ಘಾಟಿಸಿದರು. ಸಿಆರ್‌ಸಿ ಬಂದೇನವಾಜ ನಾಲತವಾಡ್ ಹಾಗೂ ಡಾ. ಯಂಕನಗೌಡ ಪಾಟೀಲ್ ಮಾತನಾಡಿದರು. ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಶಿಕ್ಷಣ ಸಂಯೋಜಕ ಶಿವಪುತ್ರಪ್ಪ, ಸಾಹಿತಿ ನಿಂಗನಗೌಡ ದೇಸಾಯಿ, ಡಿಸಿ ಪಾಟೀಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಮಧುಗೌಡ ಜಲಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸೌರಮಂಡಲ, ನೀರಿನ ಚಕ್ರ, ಪರಿಸರ ಮಾಲಿನ್ಯ, ತ್ಯಾಜ್ಯ ವಸ್ತುಗಳ ಸಂಸ್ಕರಣೆ, ಕಾಂತಿಯ ಶಕ್ತಿ, ಮಳೆನೀರು ಕೊಯ್ಲು ಹಾಗೂ ಸಸ್ಯಗಳ ಭಾಗಗಳಂತಹ ಹಲವು ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಿ ಪೋಷಕರು ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ನಂತರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮವನ್ನು ಶಾಂತಾ ಮಧುಗೌಡ ನಿರೂಪಿಸಿದರು. ಭಾಗ್ಯಶ್ರೀ ಗೀರಿಶ ಸ್ವಾಗತಿಸಿದರು. ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related Articles

Leave a Reply

Your email address will not be published. Required fields are marked *

Back to top button