ಕಲಬುರಗಿಜಿಲ್ಲಾಸುದ್ದಿ

ತಹಸೀಲ್ದಾರರ ವಿರುದ್ಧ ಕಿರುಕುಳ–ಲಂಚದ ಗಂಭೀರ ಆರೋಪ:ಜಿಲ್ಲಾಧಿಕಾರಿಗಳಿಗೆ ದೂರು

ತಸಿಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ : ಈ ಹಿನ್ನೆಲೆಯಲ್ಲಿ, ತಹಸೀಲ್ದಾರರ ವಿರುದ್ಧ ತಕ್ಷಣವೇ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಕರ್ತವ್ಯದಿಂದ ದೂರವಿಡಬೇಕು ಹಾಗೂ ಕಿರುಕುಳಕ್ಕೆ ಒಳಗಾದ ಸಿಬ್ಬಂದಿಗಳಿಗೆ ರಕ್ಷಣೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. “ಅಧಿಕಾರ ಸೇವೆಗೆ, ದೌರ್ಜನ್ಯಕ್ಕೆ ಅಲ್ಲ” ಎಂಬ ಧ್ವನಿ ಇದೀಗ ತಾಲ್ಲೂಕಿನಾದ್ಯಂತ ಕೇಳಿಬರುತ್ತಿದೆ.

ಜೇವರ್ಗಿ:ತಾಲ್ಲೂಕು ತಹಸೀಲ್ದಾರರು ತಮ್ಮ ಆಡಳಿತಾಧಿಕಾರವನ್ನು ದುರುಪಯೋಗಪಡಿಸಿ ಕೊಂಡು ವಿವಿಧ ಇಲಾಖೆಗಳ ಸಿಬ್ಬಂದಿಗಳ ಮೇಲೆ ಗಂಭೀರ ಕಿರುಕುಳ, ಹಣದ ಬೇಡಿಕೆ ಹಾಗೂ ಅವಾಚ್ಯ ಶಬ್ದಗಳಿಂದ ಬೈಯುವಂತಹ, ಅಧಿಕಾರದ ದರ್ಪ ಹಾಗೂ ಅಹಿತಕರ ವರ್ತನೆ ತೋರುತ್ತಿದ್ದಾರೆ. ಎಂಬ ಗಂಭೀರ ಆರೋಪಗಳು ಬೆಳಕಿಗೆ ಬಂದಿವೆ. ಈ ಕುರಿತು ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಜಿಲ್ಲಾಧಿಕಾರಿಗಳಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದು, ಪ್ರಕರಣವು ತಾಲೂಕು ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಿಬ್ಬಂದಿಗಳು ಸಲ್ಲಿಸಿದ ದೂರಿನ ಪ್ರಕಾರ, ತಹಸೀಲ್ದಾರ್ ಮಲ್ಲಣ್ಣ ಯೆಲಗೋಡ ಅವರು ಹಗಲು–ರಾತ್ರಿ ಎನ್ನದೆ ಅನಗತ್ಯವಾಗಿ ಕೆಲಸಕ್ಕೆ ಕರೆಸಿಕೊಳ್ಳುವುದು, ಕರ್ತವ್ಯ ಮಿತಿಯನ್ನು ಮೀರಿದ ಕಾರ್ಯಭಾರ ಹೇರುವುದು, ಹಾಗೂ “ಪ್ರತಿಯೊಬ್ಬರೂ ನನಗೆ ಹಣ ನೀಡಲೇಬೇಕು” ಎಂಬಂತೆ ಮೌಖಿಕ ಆದೇಶ ನೀಡಿರುವುದು ಅತ್ಯಂತ ಗಂಭೀರ ಆರೋಪವಾಗಿದೆ. ಹಣ ನೀಡದಿದ್ದಲ್ಲಿ “ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇನೆ, ಸರ್ವಿಸ್ ಬುಕ್ ಹಾಳುಮಾಡುತ್ತೇನೆ, ವರದಿ ಕೆಟ್ಟದಾಗಿ ಬರೆಯುತ್ತೇನೆ” ಎಂದು ಏಕವಚನದಲ್ಲಿ ಬಾಯಿಗೆ ಬಂದಂತೆ ಬೈಯುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೆಸರು ಬಹಿರಂಗಪಡಿಸಲು ಭಯಪಡುವ ಒಬ್ಬ ಸಿಬ್ಬಂದಿ ಮಾತನಾಡಿ, “ಅಧಿಕಾರ ಎಂಬ ಅಹಂಕಾರದಿಂದ ನಮ್ಮ ಮೇಲೆ ಕೂಗುವುದು, ಅವಮಾನ ಮಾಡುವುದು ನಿತ್ಯದ ಸಂಗತಿಯಾಗಿಬಿಟ್ಟಿದೆ. ಕಚೇರಿಗೆ ಹೋಗುವುದೇ ಭಯವಾಗುತ್ತಿದೆ. ಕುಟುಂಬ ಜೀವನಕ್ಕೂ ಇದು ತೊಂದರೆ ಉಂಟು ಮಾಡಿದೆ” ಎಂದು ತಮ್ಮ ಅಳಲನ್ನು ಹೊರಹಾಕಿದರು. ಮತ್ತೊಬ್ಬ ಸಿಬ್ಬಂದಿ ಹೇಳುವಂತೆ, ತಹಸೀಲ್ದಾರರ ನಿರಂಕುಶ ಆಡಳಿತದಿಂದ ತಾಲ್ಲೂಕಿನ ಇತರ ಅಧಿಕಾರಿಗಳೂ ಮೌನವಾಗಿದ್ದು, ಈ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ.

ಸಿಬ್ಬಂದಿಗಳ ದೂರಿನಲ್ಲಿ, ಇದು ಕೇವಲ ವ್ಯಕ್ತಿಗತ ಸಮಸ್ಯೆಯಲ್ಲ; ಆಡಳಿತ ವ್ಯವಸ್ಥೆಯ ಮೇಲೆಯೇ ಕೆಟ್ಟ ಪರಿಣಾಮ ಬೀರುತ್ತಿರುವ ವಿಷಯ ಎಂದು ವಿವರಿಸಲಾಗಿದೆ. ಇಂತಹ ವರ್ತನೆಯಿಂದ ಸಾರ್ವಜನಿಕ ಸೇವೆಗಳು ವಿಳಂಬವಾಗುತ್ತಿದ್ದು, ಜನಸಾಮಾನ್ಯರ ಕೆಲಸಗಳೂ ಹಿನ್ನಡೆಯಾಗುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದರ ಮೇಲೆ ಈಗ ತಾಲ್ಲೂಕಿನ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

Related Articles

Leave a Reply

Your email address will not be published. Required fields are marked *

Back to top button