ಕಲ್ಯಾಣ ಕರ್ನಾಟಕಜಿಲ್ಲಾಸುದ್ದಿ

ಆರ್‌ಎಸ್‌ಎಸ್ ನಿಷೇಧ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಬಲ – ಕಲಬುರಗಿಯಲ್ಲಿ ಮಹಿಳಾ ಕಾಂಗ್ರೆಸ್‌ನ ‘ಪೋಸ್ಟರ್’ ಪ್ರತಿಭಟನೆ

ಕಲಬುರಗಿ: ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದನ್ನು ಖಂಡಿಸಿ ಬಿಜೆಪಿ ನಾಯಕರು ನಡೆಸಿದ್ದ ‘ಪೋಸ್ಟರ್’ ಅಭಿಯಾನಕ್ಕೆ ಪ್ರತಿಯಾಗಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಬುಧವಾರ ‘ಪೋಸ್ಟರ್’ ಅಭಿಯಾನವೇ ಆಯ್ಕೆ ಮಾಡಿಕೊಂಡು ತಿರುಗೇಟು ನೀಡಿದೆ.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಾ ಸಿಂಗೆ ನೇತೃತ್ವದಲ್ಲಿ ಕಾರ್ಯಕರ್ತೆಯರು ಸಂವಿಧಾನ ಪೀಠಿಕೆಯೊಂದಿಗೆ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಬಸ್, ಆಟೋ, ಗೋಡೆ ಮತ್ತು ಫಲಕಗಳ ಮೇಲೆ ‘ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವವರು ದೇಶಪ್ರೇಮಿಗಳು’, ‘ಯಾರು ಸಂವಿಧಾನವನ್ನು ಪ್ರೀತಿಸುತ್ತಾರೋ ಅವರು ದೇಶವನ್ನೂ ಪ್ರೀತಿಸುತ್ತಾರೆ’, ‘ಯಾರು ದೇಶವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್‌ಎಸ್ ಅನ್ನು ಧಿಕ್ಕರಿಸುತ್ತಾರೆ’ ಎಂಬ ಶೀರ್ಷಿಕೆಗಳೊಂದಿಗೆ ಪೋಸ್ಟರ್‌ಗಳನ್ನು ಅಂಟಿಸಲಾಯಿತು.

ಈ ಪೋಸ್ಟರ್‌ಗಳಲ್ಲಿ ಸಂವಿಧಾನ ಪೀಠಿಕೆ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಚಿತ್ರಗಳೂ ಇದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ರೇಣುಕಾ ಸಿಂಗೆ, “ಸಚಿವ ಪ್ರಿಯಾಂಕ್ ಅವರು ಆರ್‌ಎಸ್‌ಎಸ್ ಕುರಿತು ಜನರ ಕೊರಳ ಧ್ವನಿಯಾಗಿ ಪತ್ರ ಬರೆದಿದ್ದಾರೆ. ಅವರು ಕೇವಲ ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಯಂತ್ರಣಕ್ಕೆ ಮನವಿ ಮಾಡಿದ್ದಾರೆ. ಅವರನ್ನು ಬೆಂಬಲಿಸಿ ನಾವು ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯುತ್ತೇವೆ,” ಎಂದು ಹೇಳಿದರು.

ಚಂದ್ರಿಕಾ ಪರಮೇಶ್ವರ ಹೇಳಿದರು, “ಬಿಜೆಪಿ ಸಚಿವ ಪ್ರಿಯಾಂಕ್ ಅವರ ಪತ್ರವನ್ನು ಸಹಿಸದೆ ಆರ್‌ಎಸ್‌ಎಸ್ ಬೆಂಬಲದ ಪೋಸ್ಟರ್ ಅಂಟಿಸಿದೆ. ಅದಕ್ಕೆ ಪ್ರತಿಯಾಗಿ ನಾವು ಸಂವಿಧಾನ ಸಂರಕ್ಷಣೆಗಾಗಿ ಪೋಸ್ಟರ್ ಅಂಟಿಸಿ ಸಚಿವರ ಬೆಂಬಲಕ್ಕೆ ನಿಂತಿದ್ದೇವೆ,” ಎಂದು ಹೇಳಿದರು.

ಹಿಂದಿನ ದಿನಗಳಲ್ಲಿ ಬಿಜೆಪಿ ಮುಖಂಡರು ‘ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್‌ಎಸ್‌ನ್ನೂ ಪ್ರೀತಿಸುತ್ತಾರೆ’ ಎಂಬ ಬರಹವುಳ್ಳ ಪೋಸ್ಟರ್‌ಗಳನ್ನು ಅಂಟಿಸಿದ್ದರು ಎಂಬುದು ಇಲ್ಲಿ ಸ್ಮರಣೀಯ.

Related Articles

Leave a Reply

Your email address will not be published. Required fields are marked *

Back to top button