ಕಲಬುರಗಿಜಿಲ್ಲಾಸುದ್ದಿ

ರಾಜ್ಯದಲ್ಲಿ ಅಂತರ್ಜಲದ ವೈಜ್ಞಾನಿಕ ಪರೀಕ್ಷೆ ನಡೆಸಿ: ಡಾ. ಸುಧಾ ಹಾಲಕಾಯಿ ಒತ್ತಾಯ

ಕಲಬುರಗಿ: ಬಿಹಾರದ ಹಲವು ಜಿಲ್ಲೆಗಳಲ್ಲಿ ತಾಯಿಯ ಎದೆಹಾಲಿನ ಮಾದರಿಗಳನ್ನು ಪರೀಕ್ಷೆ ಮಾಡಿ ನೋಡಿದಾಗ ಅಪಾಯಕಾರಿ ಯುರೇನಿಯಂ ಪತ್ತೆಯಾಗಿರುವುದು ಬಹಳ ಗಂಭೀರವಾದ ವಿಚಾರ. ಇದು ನಿಜಕ್ಕೂ ಆತಂಕಕಾರಿ ವಿಚಾರವೇ ಸರಿ. ಎಂದು ಕರ್ನಾಟಕ ಬಿಜೆಪಿ ವಕ್ತಾರರಾದ ಡಾ: ಸುಧಾ ಆರ್.ಹಾಲಕಾಯಿ ಅವರು ಹೇಳಿದರು.

ಪರಿಸರ ಮಾಲಿನ್ಯ, ಆಹಾರದಲ್ಲಿ ವಿಕಿರಣಕಾರಿ ವಸ್ತುಗಳ ಮಾಲಿನ್ಯದಿಂದ ಆರೋಗ್ಯ ಹದಗೆಡುತ್ತಿರುವದು ಆತಂಕದ ಸಂಗತಿ. ಭೂಮಿಯ ಒಳಗೆ ಈ ಎಲ್ಲ ಅಂಶಗಳು ಕ್ರೋಢೀಕರಣ ಆಗಿ ಈ ಅಂಶಗಳು ಬೆರೆತ ನೀರು ಕುಡಿದ ತಾಯಂದಿರ ಆರೋಗ್ಯದ ಮೇಲೆ ಬಹಳ ದೊಡ್ಡದಾದ ಪರಿಣಾಮ ಬೀರಿರುವುದು ಕಳವಳಕಾರಿ.

ಆ ನಿಟ್ಟಿನಲ್ಲಿ ಇವತ್ತು ಯುರೇನಿಯಂ ರೇಡಿಯೋ ಆಕ್ಟಿವ್ ವಿಕಿರಣದ ಅಪಾಯ ಎಚ್ಚರಿಕೆಯ ಗಂಟೆ ಬಾರಿಸುವ ಹಂತಕ್ಕೆ ತಲುಪಿದೆ. ಈ ಎಲ್ಲ ಬೆಳವಣಿಗೆಗಳು ಮಹಿಳೆಯರ ಆರೋಗ್ಯದ ಮೇಲೆ ದೊಡ್ಡ ದುಷ್ಪರಿಣಾಮ ಬೀರುತ್ತದೆ. ಕಿಡ್ನಿ, ಮೆದುಳಿನ ಬೆಳವಣಿಗೆಗೆ ಹಾನಿ, ಕ್ಯಾನ್ಸರ್ ಅಪಾಯ, ಹುಟ್ಟುವ ಮಗುವಿನ ಆರೋಗ್ಯದ ಮೇಲೂ ಅಪಾಯಕಾರಿಯಾಗುವ ಸಂಗತಿ ವೈಜ್ಞಾನಿಕ ಅಧ್ಯಯನಗಳಿಂದ ಸಾಬೀತಾಗಿದೆ.

ಈ ಪ್ರಕರಣ ಬಿಹಾರದಲ್ಲಿ ಪತ್ತೆಯಾಗಿದ್ದರೂ ಕರ್ನಾಟಕದಲ್ಲಿ ಕೂಡ ಈ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಅಂತರ್ಜಲದ ಪರೀಕ್ಷೆ ಆಗಬೇಕಾಗಿರುವುದು ತುರ್ತು ಅಗತ್ಯವಾಗಿದೆ.

ಹಿಂದೆ ದಕ್ಷಿಣ ಕನ್ನಡ ಭಾಗದಲ್ಲಿ ಎಂಡೋಸಲ್ಪಾನ್ ವಿಷ ಅಂತರ್ಜಲಕ್ಕೆ ಸೇರಿ ಬಹಳಷ್ಟು ಮಂದಿ ನಾನಾ ಬಗೆಯ ರೋಗಪೀಡಿತರಾಗಿದ್ದು, ಅಂಗಾಂಗಗಳ ವೈಕಲ್ಯಕ್ಕೆ ಒಳಗಾಗಿದ್ದು ನಮಗೆಲ್ಲ ತಿಳಿದಿದೆ. ಮುನ್ನೆಚ್ಚರಿಕೆಯಾಗಿ ತಕ್ಷಣದಲ್ಲೇ ನಾವು ಕರ್ನಾಟಕದ ಎಲ್ಲ ಜಿಲ್ಲೆಗಳ ನೀರಿನ ಗುಣಮಟ್ಟ ಅಧ್ಯಯನ ಮಾಡಬೇಕಿದೆ.

ಕರ್ನಾಟಕ ರಾಜ್ಯದ ಪರಿಸರ ಮಾಲಿನ್ಯ ಇಲಾಖೆ ಕಳೆದ ವಾರ ತನ್ನ ವರದಿಯಲ್ಲಿ ಬಿಡುಗಡೆ ಮಾಡಿದೆ. ಆ ವರದಿಯಲ್ಲಿ ಕರ್ನಾಟಕದ ಎಲ್ಲ ನದಿಗಳು ಹೇಗೆ ಮಲಿನವಾಗಿವೆ ಎಂಬುದನ್ನು ತೋರಿಸಿದೆ. ಯಾವ ನದಿಗಳ ನೀರೂ ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ನೀಡಿದೆ. ಕೇವಲ ನೇತ್ರಾವತಿ ನದಿ ಮತ್ತು ಘಟಪ್ರಭಾ ನದಿಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ನದಿಗಳ ನೀರೂ ಕಲುಷಿತಗೊಂಡಿರುವುದನ್ನು ವರದಿಯಲ್ಲಿ ತಿಳಿಸಿದೆ.

ರಾಜ್ಯ ಸರಕಾರ ಈ ಕೂಡಲೇ ಮಹಿಳೆಯರ ಎದೆಹಾಲಿನಲ್ಲಿ ವಿಷಕಾರಿ ಅಂಶಗಳು ಕಂಡುಬರುತ್ತಿರುವ ಬಗ್ಗೆ ಕೂಲಂಕಷ ಅಧ್ಯಯನ ನಡೆಸಬೇಕು. ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಇದರ ಬಗ್ಗೆ ಗಮನಹರಿಸಬೇಕು. ಕಲ್ಯಾಣ ಕರ್ನಾಟಕ ಈಗಾಗಲೇ ಅಪೌಷ್ಟಿಕತೆಯಿಂದ ಬಳಲುತ್ತಿದೆ. ತಾಯಂದಿರ ಆರೋಗ್ಯದ ಅನುಪಾತದಲ್ಲೂ ಕುಸಿತ ಕಂಡುಬಂದಿದೆ. ಹೀಗಾಗಿ ಸರಕಾರ ಕೂಡಲೇ ಈ ನಿಟ್ಟಿನಲ್ಲಿ ಸಮಗ್ರ ಅಧ್ಯಯನ ನಡೆಸಬೇಕೆಂದು ಎಂದು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button