ರೈತರ ನೋವು ಕೇಳದ ಸರಕಾರ:ಜೇವರ್ಗಿ ಭೀಮ ಆರ್ಮಿ ಯುವಶಕ್ತಿಯಿಂದ ತೀವ್ರ ಆಕ್ರೋಶ

ಜೇವರ್ಗಿ: ನಿರಂತರ ಮಳೆ ಹೊಳೆ ಮತ್ತು ಅನಿಯಂತ್ರಿತ ಹವಾಮಾನದಿಂದಾಗಿ ಈ ವರ್ಷ ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ, ಅವರ ಸಮಸ್ಯೆಗಳತ್ತ ಸರ್ಕಾರ ಸ್ಪಂದಿಸದೆ ಕಾಲಹರಣ ಮಾಡುತ್ತಿದೆ ಎಂದು ಭೀಮ ಆರ್ಮಿ ಯುವಶಕ್ತಿ ಜೇವರ್ಗಿ ತಾಲೂಕು ಸಮಿತಿ ಅಧ್ಯಕ್ಷ ರಾಜಶೇಖರ ಕಟ್ಟಿಸಂಗಾವಿ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ರೈತರ ಜೀವನ, ಮೂಲಭೂತ ಸೌಕರ್ಯಗಳು ಹಾಗೂ ಸಾಮಾನ್ಯ ಜನರ ಸಮಸ್ಯೆಗಳ ಕಡೆ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಆರೋಪಿಸಿದ ಅವರು ರಸ್ತೆಗಳ ಗುಂಡಿಗಳು, ಮಹಿಳೆಯರ ಶೌಚಾಲಯಗಳ ಕೊರತೆ, ದಲಿತ ಹಾಗೂ ಹಿಂದುಳಿದ ವರ್ಗದ ಜನರಿಗೆ ರುದ್ರಭೂಮಿ ಜಾಗದ ಅಸಮರ್ಪಕತೆ ಇವರೆಲ್ಲವೂ ಜೇವರ್ಗಿ ತಾಲೂಕಿನಲ್ಲಿ ಗಂಭೀರ ಸಮಸ್ಯೆಗಳಾಗಿ ಉಳಿದಿವೆ, ಆದರೆ ಸರ್ಕಾರ ಪರಿಹಾರ ಒದಗಿಸಲು ವಿಫಲವಾಗಿದೆ ಎಂದು ಆರೋಪಿಸಿದರು.
ಈ ವರ್ಷ ಕಬ್ಬು ಬೆಳೆಗಳಿಗೆ ಸರ್ಕಾರ ನಿಗದಿತ ಬೆಲೆ ಪ್ರಕಟಿಸಬೇಕು,ಹತ್ತಿ, ತೊಗರಿ, ಹೆಸರು ಮುಂತಾದ ಬೆಳೆಗಳಿಗೆ ಪ್ರತಿ ಕ್ವಿಂಟಾಲಿಗೆ ರೂ.10,000 ಬೆಂಬಲ ಬೆಲೆ ನಿಗದಿ ಪಡಿಸಬೇಕು,ಮಧ್ಯವರ್ತಿಗಳ ಹಾವಳಿಗೆ ಮುಕ್ತಿ ನೀಡಲು ಎಪಿಎಂಸಿಯಲ್ಲಿ ಕರಿದಿಗೆ ಮೊದಲು ಆದೇಶ ಜಾರಿಗೊಳಿಸಬೇಕು ಎಂದು ಕೋರಿದ್ದಾರೆ.
ಅದೇ ರೀತಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಅನುಮೋದನೆಗೊಂಡ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಮಂಜೂರಾದ ಜೇವರ್ಗಿ ತಾಲೂಕಿನ ಎಲ್ಲಾ ಗ್ರಾಮಗಳ ಸಿ.ಸಿ ರಸ್ತೆ ಕಾಮಗಾರಿಗಳನ್ನು ತಕ್ಷಣ ಆರಂಭಿಸಿ ಪೂರ್ಣಗೊಳಿಸಬೇಕು ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.
ರೈತರ ಹಿತ, ಗ್ರಾಮೀಣ ಸೌಕರ್ಯಗಳ ಸುಧಾರಣೆ ಮತ್ತು ದಲಿತ-ಹಿಂದುಳಿದ ವರ್ಗದ ಮೂಲಭೂತ ಬೇಡಿಕೆಗಳನ್ನು ತಕ್ಷಣ ಪೂರೈಸದಿದ್ದರೆ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವುದಾಗಿ ರಾಜಶೇಖರ ಕಟ್ಟಿಸಂಗಾವಿ ಎಚ್ಚರಿಕೆ ನೀಡಿದ್ದಾರೆ.



