ಕಲಬುರಗಿಜಿಲ್ಲಾಸುದ್ದಿ

“MRW–VRW–URW ಕಾರ್ಯಕರ್ತರ ಕನಿಷ್ಠ ವೇತನಕ್ಕೆ ರಾಜ್ಯವ್ಯಾಪಿ ಒತ್ತಾಯ:ಸಚಿವ ಪ್ರಿಯಾಂಕ ಖರ್ಗೆಯಿಂದ ತ್ವರಿತ ಪರಿಹಾರದ ಭರವಸೆ

ಕಲಬುರಗಿ : MRW, VRW ಮತ್ತು URW ವಿಕಲಚೇತನ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು. ರಾಜ್ಯದಾದ್ಯಂತ ಸುಮಾರು 6,860ಕ್ಕೂ ಹೆಚ್ಚು ಪುನರ್ವಸತಿ ಕಾರ್ಯಕರ್ತರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ, MRWಗಳಿಗೆ ರೂ.16,000 ಮತ್ತು VRW/URWಗಳಿಗೆ ರೂ.10,000 ಗೌರವಧನವೇ ನೀಡಲಾಗುತ್ತಿರುವುದು ಬದುಕಿಗೆ ಸಾಲದೇ, ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಕಾರ್ಮಿಕ ಇಲಾಖೆಯು ಸಿದ್ಧಪಡಿಸಿರುವ ಕಡತ ಸಂಖ್ಯೆ 155 ಪ್ರಸ್ತಾವನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಳಿ ತಿಂಗಳಗಳಿಂದ ಬಾಕಿ ಉಳಿದಿದೆ ಎಂದು ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿಗಳಲ್ಲಿ VRWಗಳ ಇ–ಹಾಜರಾತಿ ತೊಂದರೆ ಪರಿಹಾರವಾಗಿ ಪ್ರತ್ಯೇಕ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಲಾಯಿತು.

ವಿಕಲಚೇತನರಿಗಾಗಿ ಮೀಸಲಾದ ಶೇ.5ರ ಅನುದಾನವನ್ನು ‘ಒಟ್ಟಾರೆ ಖರ್ಚು’ ಪದ್ಧತಿಗೆ ಬದಲಿಸಲಾಗಿದೆ. ಇದರಿಂದ ವಿಕಲಚೇತನರಿಗೆ ನೇರ ನೆರವು ತಲುಪುವುದಿಲ್ಲವೆಂದು ಆರೋಪಿಸಿ, ಹಿಂದಿನಂತೆ ವಿದ್ಯಾರ್ಥಿಗಳು ಹಾಗೂ ವ್ಯಕ್ತಿಗಳಿಗೆ ವೈಯುಕ್ತಿಕ ಮಟ್ಟದಲ್ಲಿ ನೆರವು ನೀಡುವ ಪದ್ಧತಿ ಮರುಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಧರಣಿ ಸ್ಥಳಕ್ಕೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಭೇಟಿ ನೀಡಿ ಕಾರ್ಯಕರ್ತರ ಬೇಡಿಕೆಗಳನ್ನು ಆಲಿಸಿದರು. ಸಮಸ್ಯೆಯನ್ನು ರಾಜ್ಯಮಟ್ಟದಲ್ಲಿ ಚರ್ಚಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸ್ಥಳದಲ್ಲೇ ಕರೆ ಮಾಡಿ ಪರಿಸ್ಥಿತಿ ಕುರಿತು ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಿದ ಬಗ್ಗೆ ಪ್ರತಿಭಟನಾಕಾರರಿಗೆ ತಿಳಿಸಿದ್ದಾರೆ.

ಕಾರ್ಯಕರ್ತರು ಬೇಡಿಕೆಗಳು ಈಡೇರದಿದ್ದರೆ ರಾಜ್ಯವ್ಯಾಪಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

ಈ ಪ್ರತಿಭಟನಾ ಧರಣಿಯಲ್ಲಿ ಡಾ.ಅಂಬಾಜಿ ಪಿ.ಮೇಟಿ,ವೆಂಕಟಪ್ಪ ಚವ್ಹಾಣ,ಮಹೇಶ್ ಕುಲಕರ್ಣಿ,ಮಲ್ಲಿಕಾರ್ಜುನ್ ಪಟ್ಟಿಮನಿ,ನಾಗರಾಜ ನಾಟಿಕರ,ಸಿದ್ದಾರೂಡ ಬಿರಾದಾರ್,ಜಬ್ಬಾರ್ ಅಲಿ ಮನಿಯರ್,ಶ್ರೀಮಂತ್ ಪಾಟೀಲ, ರಾಜೇಂದ್ರ ಕಮಕನೂರ,ನಾನಾಗೌಡ ಹೊನ್ನಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button