ಕೋಲಿ ಸಮಾಜದ ಸ್ವಾಭಿಮಾನದ ಬೃಹತ್ ಪ್ರತಿಭಟನೆ ಅಭೂತಪೂರ್ವ ಯಶಸ್ವಿ: ರಾಜೇಶ್ ಹೋಳಿಕಟ್ಟಿ

ಚಿತ್ತಾಪುರ: ಕಲಬುರಗಿ ಜಿಲ್ಲೆಯಲ್ಲಿ ಸಮಾಜದ ಗುರುಗಳ ಸಾನಿಧ್ಯದಲ್ಲಿ ಕೋಲಿ ಕಬ್ಬಲಿಗ ಎಸ್.ಟಿ ಸೇರ್ಪಡೆಗಾಗಿ ಸೋಮವಾರ ನಡೆದ ಸ್ವಾಭಿಮಾನದ ಬೃಹತ್ ಪ್ರತಿಭಟನೆಯಲ್ಲಿ ಸ್ವ ಇಚ್ಛೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸ್ವಾಭಿಮಾನಿಗಳು ಭಾಗವಹಿಸಿ ಅಭೂತಪೂರ್ವ ಯಶಸ್ವಿಗೊಳಿಸಿದಕ್ಕೆ ತಾಲೂಕ ಯುವ ಕೋಲಿ ಸಮಾಜ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ಕೃತಜ್ಞತೆಗಳು ಸಲ್ಲಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿಭಟನೆ ರದ್ದು ಮಾಡಲಾಗಿದೆ, ಹಿಂದಕ್ಕೆ ಪಡೆಯಲಾಗಿದೆ, ಯಾರೂ ಬರಬೇಡಿ ಅಂತೆಲ್ಲಾ ಕೆಲವರು ಹೇಳಿಕೆ ನೀಡಿ ಗೊಂದಲ ಮೂಡಿಸಿದ್ದರೂ ಸಹ ಅದನ್ನು ಲೆಕ್ಕಿಸದೆ ಪಕ್ಷಬೇಧ ಮರೆತು ಸ್ವಯಂಪ್ರೇರಿತವಾಗಿ ವಿವಿಧ ಜಿಲ್ಲೆಗಳಿಂದ ತಾಲೂಕುಗಳಿಂದ ಮತ್ತು ಪ್ರತಿಯೊಂದು ಹಳ್ಳಿ ಹಳ್ಳಿಗಳಿಂದ ಸಹಸ್ರ ಸಂಖ್ಯೆಯಲ್ಲಿ ಕೋಲಿ ಸಮಾಜದ ಬಂಧುಗಳು ಆಗಮಿಸಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ನೀನು ಎನ್ನದೆ ಸಮಾಜದ ಸ್ವಾಭಿಮಾನದಿಂದ ಸಾವಿರಾರು ಸಂಖ್ಯೆಯಲ್ಲಿ ಬಂದು ಸ್ವಾಭಿಮಾನದ ಸಿಂಹ ದಿ.ವಿಠಲ ಹೇರೂರು ಅವರ ಕನಸನ್ನು ನನಸು ಮಾಡಲು ತಡರಾತ್ರಿ ಆದರೂ ಸಮಯವನ್ನೇ ಲೆಕ್ಕಿಸದೆ, ಚಳಿಯಲ್ಲಿಯೂ ಪ್ರತಿಭಟನೆ ನಡೆಸಿ ಕಲಬುರಗಿ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿಸುವಂತೆ ಮಾಡಿದ ಸಮಾಜ ಬಾಂಧವರಿಗೆ ಚಿತ್ತಾಪುರ ತಾಲೂಕು ಯುವ ಕೋಲಿ ಸಮಾಜದ ವತಿಯಿಂದ ಹೃದಯ ಪೂರ್ವಕವಾಗಿ ಧನ್ಯವಾದಗಳು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.



