ಕಲ್ಯಾಣ ಕರ್ನಾಟಕಜಿಲ್ಲಾಸುದ್ದಿ

ಭೀಮಾ ಪ್ರವಾಹ ದುರಂತ – ತಲುಪದ ತಾಲೂಕ ಆಡಳಿತ!

ವರದಿ :✍️ ರಾಜು ಮುದ್ದಡಗಿ.

“ಮಹಿಳಾ ತಾಯಂದಿರ ಕಣ್ಣೀರು ನೋಡಿ ಅವರ ಸಂಕಷ್ಟ ನೋಡಿ ಕಣ್ಣೀರು ಬರ್ತಾ ಇದೆ. ಇದನ್ನು ಕೇಳುವುದಕ್ಕೆ ಹೃದಯ ಬೇಕು. ಹೃದಯ ಇಲ್ಲದ ಶಾಸಕನಿಗೆ ಕಣ್ಣೀರಿನ ಬೆಲೆ ತಿಳಿಯುವುದಿಲ್ಲ” – ಇಬ್ರಾಹಿಂ ಪಟೇಲ್, ಆದರ್ಶ ಗ್ರಾಮ ಸಮಿತಿ ಅಧ್ಯಕ್ಷರು, ಯಾಳವಾರ.

ಜೇವರ್ಗಿ: ಕಳೆದ ನಾಲ್ಕು ದಿನಗಳಿಂದ ಭೀಮಾ ನದಿಯ ಪ್ರವಾಹ ಕಟ್ಟಿಸಂಗಾವಿ ಗ್ರಾಮದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಆದರೆ ಸಂತ್ರಸ್ತರಿಗೆ ಇನ್ನೂ ಪರಿಣಾಮಕಾರಿ ನೆರವು ತಲುಪಿಲ್ಲ ಎಂಬುದು ಗ್ರಾಮಸ್ಥರ ನೋವು.

ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿರುವ ನೂರಕ್ಕೂ ಹೆಚ್ಚು ಕುಟುಂಬಗಳು ಊಟ-ನೀರು, ಹಾಸಿಗೆ, ಔಷಧಿ ಮೊದಲಾದ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಪರದಾಡುತ್ತಿವೆ. “ಅಧಿಕಾರಿಗಳು ರಸ್ತೆಬದಿಯಲ್ಲಿ ನಿಂತು ಫೋಟೋ ತೆಗೆದು ಹೋದರೆ ಸಾಲದು, ಜನರ ಬದುಕು ಎಷ್ಟು ದುಸ್ತರವಾಗಿದೆಯೆಂದು ಅಲ್ಲಿ ಒಂದು ರಾತ್ರಿ ಕಳೆದರೆ ಮಾತ್ರ ಅರ್ಥವಾಗುತ್ತದೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕು ಆಡಳಿತ ಪ್ರವಾಹ ಪರಿಹಾರ ಕಾರ್ಯಗಳಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. “ಮೂರು ದಿನಗಳಿಂದ ಗಂಜಿ ಕೇಂದ್ರದಲ್ಲಿಯೂ ಊಟವಿಲ್ಲ. ಮಕ್ಕಳಿಗೂ ಹಾಲು, ಹಿರಿಯರಿಗೆ ಔಷಧಿ ಸಿಗದ ಸ್ಥಿತಿ. ಮನುಷ್ಯತ್ವ ಇದ್ದರೆ ಈ ಕೂಡಲೇ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು” ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯದ ಮೇಲೂ ಗ್ರಾಮಸ್ಥರ ಅಸಮಾಧಾನ ತೀವ್ರವಾಗಿದೆ. “ಶಾಸಕರು ಬಂದು ಒಂದು ಮಾತು ಹೇಳಿ ಹೋದರೆ ಸಾಲದು. ಕೆಲಸ ಮಾಡಬೇಕು, ಜನರ ಕಣ್ಣೀರನ್ನು ಒರೆಸಬೇಕು” ಎಂದು ಸಾರ್ವಜನಿಕರು ಬೇಸರಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಾಬು ಬಿ. ಪಾಟೀಲ್ ಮುತ್ಕೋಡ, ರಾಜಾ ಪಟೇಲ್ ಯಾಳವಾರ, ಮಹೇಶ್ ಛತ್ರಿ, ಮರಿಯಪ್ಪ ಹಸನಾಪುರ ಸೇರಿದಂತೆ ಅನೇಕ ಗ್ರಾಮಸ್ಥರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button