Breaking news|ಭೂಸ್ವಾಧೀನ ಪರಿಹಾರ ವಿಳಂಬ: ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡಲು ನ್ಯಾಯಾಲಯದ ಆದೇಶ

ಕಲಬುರಗಿ: ನಗರ ವ್ಯಾಪ್ತಿಯಲ್ಲಿ ಭೂಸ್ವಾಧೀನ ಮಾಡಿಕೊಂಡ ಬಳಿಕ ಹಲವು ವರ್ಷಗಳಾದರೂ ಪರಿಹಾರ ಧನ ನೀಡದೆ ವಿಳಂಬ ಮಾಡಿರುವ ಪ್ರಕರಣದಲ್ಲಿ, ಪ್ರಧಾನ ಸಿವಿಲ್ ನ್ಯಾಯಾಲಯದ ದಿವಾಣಿ ಹಿರಿಯ ಶ್ರೇಣಿ ನ್ಯಾಯಾಧೀಶರು ಜಿಲ್ಲಾಧಿಕಾರಿಗಳ ಅಧಿಕೃತ ವಾಹನವನ್ನು ಜಪ್ತಿ ಮಾಡುವಂತೆ ಆದೇಶಿಸಿದ್ದಾರೆ.
ಕೇಸ್ ನಂಬರ್ 59/19 ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಜಿಲ್ಲಾಧಿಕಾರಿಗಳ ಅಧಿಕೃತ ಕಾರು ಇನ್ನೋವಾ ಕ್ರಿಷ್ಟಾ (ಕೆ.ಎ 32 ಜಿ 9990) ಅನ್ನು ಜಪ್ತಿ ಮಾಡಲು ಆದೇಶ ಹೊರಡಿಸಿದೆ. ನ್ಯಾಯಾಲಯದ ಈ ಕ್ರಮ ಜಿಲ್ಲಾಡಳಿತದ ವಿರುದ್ಧ ಗಂಭೀರ ಸಂದೇಶ ನೀಡಿದಂತಾಗಿದೆ.
ಪ್ರಕರಣದ ಹಿನ್ನೆಲೆ ಏನು?
ಪ್ರಕಾಶ್ ಮಕಲಪ್ಪ ಎಂಬವರು ತಮ್ಮ ಭೂಮಿಯನ್ನು ಸರ್ಕಾರ ಭೂಸ್ವಾಧೀನ ಮಾಡಿಕೊಂಡಿದ್ದರೂ, ವರ್ಷಗಳಾದರೂ ಪರಿಹಾರ ಧನ ನೀಡಲಾಗಿಲ್ಲ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಪರಿಹಾರ ಪಾವತಿಯಲ್ಲಿ ಅನಾವಶ್ಯಕ ವಿಳಂಬವಾಗಿರುವುದು ನ್ಯಾಯಾಲಯದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.
ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಾಹನ ಜಪ್ತಿ ಪ್ರಕ್ರಿಯೆ ಆರಂಭಿಸಲು ಮುಂದಾ ದರು. ಈ ವೇಳೆ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಸಹಾಯಕ ಆಯುಕ್ತ ಸಾಹಿತ್ಯ ಆಲದಕಟ್ಟಿ ಅವರು ಸ್ಥಳಕ್ಕೆ ಆಗಮಿಸಿ ವಕೀಲರೊಂದಿಗೆ ಚರ್ಚೆ ನಡೆಸಿ ಮನವೊಲಿ ಸಲು ಪ್ರಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.
ಈ ಘಟನೆ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಭೂಸ್ವಾಧೀನ ಪ್ರಕರಣಗಳಲ್ಲಿ ಪರಿಹಾರ ಪಾವತಿಯನ್ನು ಸಮಯಕ್ಕೆ ಸರಿಯಾಗಿ ನೀಡಬೇಕೆಂಬ ಅಗತ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ.



