ಹಳೆಯ ಸಮೀಕ್ಷೆ ಆಧರಿಸಿ ಜನರನ್ನು ದಾರಿತಪ್ಪಿಸುವ ಯತ್ನ: ಚುನಾವಣಾ ಅಕ್ರಮ ಆರೋಪಗಳ ಮೇಲೆ ಪ್ರತಿಪಕ್ಷಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಚುನಾವಣಾ ಆಯೋಗದ ಹಳೆಯ ಸಮೀಕ್ಷೆಯೊಂದನ್ನು ಆಧಾರವಾಗಿಟ್ಟುಕೊಂಡು ಪ್ರತಿಪಕ್ಷಗಳು ಜನರನ್ನು ದಾರಿತಪ್ಪಿಸುವ ವ್ಯರ್ಥ ಪ್ರಯತ್ನ ಮಾಡುತ್ತಿರುವುದು ಅತ್ಯಂತ ವಿಷಾದನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಟೀಕಿಸಿದ್ದಾರೆ.
ಚುನಾವಣಾ ಅಕ್ರಮಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಗದೆ, ಅವುಗಳನ್ನು ‘ತಪ್ಪು’ ಎಂದು ಬಿಂಬಿಸುವ ಕುತಂತ್ರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಈ ಕಥನಗಳ ವಿಶ್ವಾಸಾರ್ಹತೆಯನ್ನು ಆಳವಾಗಿ ಪರಿಶೀಲಿಸಿದರೆ, ಇದರ ಹಿಂದಿರುವ ರಾಜಕೀಯ ದುರುದ್ದೇಶ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಸಿಎಂ ಹೇಳಿದರು.
ಈ ಸಂಬಂಧ ಅವರು ಐದು ಪ್ರಮುಖ ಅಂಶಗಳನ್ನು ಮುಂದಿಟ್ಟು ಪ್ರತಿಪಕ್ಷಗಳ ವಾದವನ್ನು ಖಂಡಿಸಿದ್ದಾರೆ.ಮೊದಲನೆಯದಾಗಿ, ವಿವಾದಕ್ಕೆ ಗ್ರಾಸವಾಗಿರುವ ಈ ಸಮೀಕ್ಷೆ ರಾಜ್ಯ ಚುನಾವಣಾ ಆಯೋಗವು ಮೇ 2025ರಲ್ಲಿ ನಡೆಸಿದ ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಷನ್ ಅಂಡ್ ಎಲೆಕ್ಟೋರಲ್ ಪಾರ್ಟಿಸಿಪೇಷನ್ (ಸ್ವೀಪ್) ಕಾರ್ಯಕ್ರಮದ ಭಾಗವಾಗಿದೆ.
ಜನರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದೇ ಇದರ ಉದ್ದೇಶವಾಗಿತ್ತೇ ಹೊರತು, ರಾಹುಲ್ ಗಾಂಧಿ ಅವರು ಉಲ್ಲೇಖಿಸಿದ ಮತಗಳ್ಳತನ ಅಥವಾ ಚುನಾವಣಾ ಅಕ್ರಮಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸುವ ಸಮೀಕ್ಷೆಯಲ್ಲ. ಮತದಾರರ ಜಾಗೃತಿಯ ಉದ್ದೇಶದ ಸಮೀಕ್ಷೆಯನ್ನು ಚುನಾವಣಾ ಅಕ್ರಮದ ಜನಾಭಿಪ್ರಾಯವೆಂದು ಬಿಂಬಿಸುವುದು ಜನರನ್ನು ದಾರಿತಪ್ಪಿಸುವ ರಾಜಕೀಯ ಹುನ್ನಾರವಾಗಿದೆ ಎಂದು ಸಿಎಂ ಹೇಳಿದರು.
ಎರಡನೆಯದಾಗಿ, ಸಮೀಕ್ಷೆ ನಡೆದ ಸಮಯವೇ ಈ ವಾದದ ಅಸಂಬದ್ಧತೆಯನ್ನು ತೋರಿಸುತ್ತದೆ. ಮೇ 2025ರಲ್ಲಿ ಸಮೀಕ್ಷೆ ನಡೆಸಲಾಗಿದ್ದು, ರಾಹುಲ್ ಗಾಂಧಿ ಅವರು ಚುನಾವಣಾ ಅಕ್ರಮಗಳ ಕುರಿತು ಪುರಾವೆಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದು ಆಗಸ್ಟ್ 2025ರಲ್ಲಿ. ಅಂದರೆ ಸಮೀಕ್ಷೆ ನಡೆದ ಸುಮಾರು ಮೂರು ತಿಂಗಳ ಬಳಿಕ ಅವರು ಮತಗಳ್ಳತನದ ವಿರುದ್ಧ ಧ್ವನಿಯೆತ್ತಿದ್ದಾರೆ. ಹಿಂದಿನ ಅವಧಿಯ ಡೇಟಾವನ್ನು ಬಳಸಿಕೊಂಡು ನಂತರದ ಆರೋಪಗಳಿಗೆ ಜನಮನ್ನಣೆ ಇಲ್ಲ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ಎಂದು ಸಿಎಂ ವ್ಯಂಗ್ಯವಾಡಿದರು.
ಮೂರನೆಯದಾಗಿ, ಸಮೀಕ್ಷೆಯ ಮಾದರಿ ಪ್ರಮಾಣವೇ ದೊಡ್ಡ ಲೋಪವಾಗಿದೆ. ರಾಜ್ಯದಲ್ಲಿ ಸುಮಾರು 5.3 ಕೋಟಿಗೂ ಹೆಚ್ಚು ವಯಸ್ಕ ಮತದಾರರಿದ್ದಾಗ ಕೇವಲ 5,100 ಜನರನ್ನು ಮಾತ್ರ ಸಮೀಕ್ಷೆಗೆ ಒಳಪಡಿಸಲಾಗಿದೆ. ಇದು ಒಟ್ಟು ಮತದಾರರ 0.01 ಶೇಕಡಕ್ಕೂ ಕಡಿಮೆ ಪ್ರಮಾಣವಾಗಿದೆ. ಇಂತಹ ಸಣ್ಣ ಮಾದರಿಯನ್ನು ಆಧರಿಸಿ ರಾಜ್ಯದ ಜನಾಭಿಪ್ರಾಯವನ್ನು ನಿರ್ಧರಿಸುವುದು ವೈಜ್ಞಾನಿಕವಾಗಿಯೂ ಸಮರ್ಥನೀಯವಲ್ಲ. ವಿಶೇಷವಾಗಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಂತಹ ಸಂವೇದನಾಶೀಲ ಕ್ಷೇತ್ರದಲ್ಲಿ ಮತದಾರರ ಪಟ್ಟಿಯನ್ನು ತಿರುಚಿರುವ ಆರೋಪಗಳಿದ್ದರೂ, ಅಲ್ಲಿ ಸಮೀಕ್ಷೆಗೆ ಒಳಪಟ್ಟಿರುವವರ ಸಂಖ್ಯೆ ಎರಡಂಕಿಯನ್ನು ಕೂಡ ದಾಟಿಲ್ಲ. ಇದನ್ನೇ ಜನರ ತೀರ್ಮಾನ ಎಂದು ಬಿಂಬಿಸುವುದು ಸರಿಯಲ್ಲ ಎಂದು ಅವರು ಹೇಳಿದರು.ನಾಲ್ಕನೆಯದಾಗಿ, ಸಮೀಕ್ಷೆ ನಡೆಸಿದ ಸಂಸ್ಥೆಯ ಹಿನ್ನೆಲೆಯನ್ನೂ ಮಾಧ್ಯಮಗಳು ಪರಿಶೀಲಿಸಿಲ್ಲ ಎಂದು ಸಿಎಂ ಆರೋಪಿಸಿದರು.
ಈ ಸಮೀಕ್ಷೆಯನ್ನು ಡಾ. ಆರ್. ಬಾಲಸುಬ್ರಮಣ್ಯಂ ಸ್ಥಾಪಿಸಿದ GRAAM ಎಂಬ ಎನ್ಜಿಒ ನಡೆಸಿದೆ. ಡಾ. ಬಾಲಸುಬ್ರಮಣ್ಯಂ ಅವರು ಪ್ರಸ್ತುತ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಹುದ್ದೆಯಲ್ಲಿದ್ದಾರೆ. ಅವರು 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬರೆದಿರುವ ಪುಸ್ತಕವನ್ನು ನೋಡಿದರೆ, ಅವರ ರಾಜಕೀಯ ಒಲವು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂತಹ ಹಿನ್ನೆಲೆ ಹೊಂದಿರುವವರ ಸಮೀಕ್ಷೆಯನ್ನು ಆಧಾರವಾಗಿಸಿಕೊಂಡು ವರದಿ ಮಾಡಿರುವುದು ವಿಶ್ವಾಸಾರ್ಹತೆಯ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಐದನೆಯದಾಗಿ, ಸಮೀಕ್ಷಾ ವರದಿಯನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧಿ ಅವರ ಆರೋಪದಲ್ಲಿ ಯಾವುದೇ ತಾತ್ಪರ್ಯವಿಲ್ಲ ಎಂಬ ಭಾವನೆ ಮೂಡಿಸಲು ಪ್ರಯತ್ನಿಸಲಾಗಿದೆ. ಇದು ಪ್ರಜಾಪ್ರಭುತ್ವದ ಚರ್ಚೆಗೆ ಧಕ್ಕೆ ತರುವಂತದ್ದು ಎಂದು ಅವರು ಟೀಕಿಸಿದ ರು.ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವವನ್ನಾಗಲಿ, ಚುನಾವಣೆಯನ್ನಾಗಲಿ ಪ್ರಶ್ನಿಸಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಅವರು ಚುನಾವಣಾ ಆಯೋಗವು ಪಾರದರ್ಶಕವಾಗಿ ತಯಾರಿಸಿರುವ ಮತದಾರರ ಪಟ್ಟಿಗಳು, ಮತಗಟ್ಟೆಗಳ ಸಿಸಿಟಿವಿ ದೃಶ್ಯಗಳು, ಇವಿಎಂ ಕಾರ್ಯವೈಖರಿಯ ಪಾರದರ್ಶಕತೆ ಮತ್ತು ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಕುರಿತು ಪ್ರಶ್ನಿಸಿದ್ದಾರೆ. ಆದರೆ ಈ ಯಾವ ಪ್ರಶ್ನೆಗಳಿಗೂ ಚುನಾವಣಾ ಆಯೋಗ ಸಮಂಜಸ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.ಮತಗಳ್ಳತನವು ಕೇವಲ ಘೋಷಣೆಯಲ್ಲ, ಅದು ಗಂಭೀರ ಆರೋಪಪಟ್ಟಿಯಾಗಿದೆ ಎಂದು ಸಿಎಂ ಹೇಳಿದರು.
ಅಳಂದ ಕ್ಷೇತ್ರದಲ್ಲಿ ಸುಮಾರು 5,994 ಅಧಿಕೃತ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲು ಪ್ರಯತ್ನಿಸಿರುವ ಪ್ರಕರಣದಲ್ಲಿ ತನಿಖೆ ನಡೆಸಿದ ಎಸ್ಐಟಿ 22,000 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದೆ. ಈ ಪ್ರಕರಣದಲ್ಲಿ @BJP4Karnataka ಪಕ್ಷದ ಮಾಜಿ ಶಾಸಕರು ಸೇರಿದಂತೆ ಏಳು ಮಂದಿ ಆರೋಪಿಗಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೂ ಸಹ, ರಾಜ್ಯ ಸರ್ಕಾರ ಎಸ್ಐಟಿ ತನಿಖೆ ನಡೆಸಿದ್ದು, ಚುನಾವಣಾ ಆಯೋಗವೇ ಈ ಆರೋಪವನ್ನು ಮರೆಮಾಚಲು ವ್ಯವಸ್ಥಿತ ಪ್ರಯತ್ನ ಮಾಡಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.
ಅಂತಿಮವಾಗಿ, ಸಂಶಯಾಸ್ಪದ ಸಂಸ್ಥೆಯ ಮೂಲಕ ನಡೆಸಿದ ದೋಷಪೂರಿತ ಸಮೀಕ್ಷೆಯ ವರದಿಯನ್ನು ಬಳಸಿಕೊಂಡು ರಾಹುಲ್ ಗಾಂಧಿ ಅವರು ಮಾಡಿದ ಆರೋಪಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಕಟುವಾಗಿ ಹೇಳಿದರು.
ಸಮೀಕ್ಷೆಯ ಒಳಹೊರಗನ್ನು ಸೂಕ್ಷ್ಮವಾಗಿ ಪರಿಶೀಲಿಸದೆ, ಅದರ ಗುಪ್ತ ಅಜೆಂಡಾವನ್ನು ಅರ್ಥಮಾಡಿಕೊಳ್ಳದೆ, ವರದಿಯ ಕೆಲ ಭಾಗಗಳನ್ನು ಮಾತ್ರ ಆಯ್ದು ಮಾಧ್ಯಮಗಳು ಸುದ್ದಿ ಮಾಡಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ಟೀಕಿಸಿದರು.



