ಕಲ್ಯಾಣ ಕರ್ನಾಟಕರಾಜ್ಯ

ಆಳಂದ ಕ್ಷೇತ್ರದಲ್ಲಿ ಮತ ಕಳವು ಪ್ರಯತ್ನ: ಬಿ.ಆರ್. ಪಾಟೀಲ ಗಂಭೀರ ಆರೋಪ

ಬೆಂಗಳೂರು: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆ ವೇಳೆ ಮತ ಕಳವು ಪ್ರಯತ್ನ ನಡೆದಿದ್ದು, ತಕ್ಷಣ ಎಚ್ಚರಿಕೆಯಿಂದ ವರ್ತಿಸದೇ ಇದ್ದಿದ್ದರೆ ಸೋಲಬೇಕಾಗುತ್ತಿತ್ತು ಎಂದು ಶಾಸಕ ಬಿ.ಆರ್. ಪಾಟೀಲ ಆರೋಪಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅರ್ಹರಾಗಿದ್ದ 6,018 ಮತದಾರರನ್ನು ಪಟ್ಟಿಯಿಂದ ತೆಗೆಸಲು ನಕಲಿ ಐಡಿಗಳ ಆಧಾರದಲ್ಲಿ ನಕಲಿ ದೂರುಗಳನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿತ್ತು. ನಾವು ಸಮಯಕ್ಕೆ ಎಚ್ಚೆತ್ತುಕೊಂಡು ಆಯೋಗದ ಗಮನಕ್ಕೆ ತಂದೆವು. ನನ್ನ ದೂರಿನ ಆಧಾರದಲ್ಲಿ ಅಂದಿನ ಉಪ ವಿಭಾಗಾಧಿಕಾರಿ ಎಫ್‌ಐಆರ್ ದಾಖಲಿಸಿದ್ದರು. ಇದರ ನಂತರ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಕೆಲಸ ನಿಲ್ಲಿಸಲಾಯಿತು. ಆದರೆ, ಮತ ಕಳವಿಗೆ ಯತ್ನಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ” ಎಂದು ಪಾಟೀಲ ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗೃಹ ಸಚಿವ ಡಾ.ಜಿ. ಪರಮೇಶ್ವರ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರೂ, ಆಯೋಗ ಸಹಕಾರ ನೀಡಿಲ್ಲ ಎಂದು ಅವರು ದೂರಿದರು. “ಸಿಐಡಿ ಹಲವು ಬಾರಿ ಪತ್ರ ಬರೆದರೂ ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಬಂದಿಲ್ಲ. ಇದೀಗ ರಾಹುಲ್ ಗಾಂಧಿ ಮಾಡಿದ ಆರೋಪಕ್ಕೆ ಉತ್ತರ ನೀಡಲಾಗಿದೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ವಾಸ್ತವದಲ್ಲಿ ಅವರು ಯಾವ ಉತ್ತರವನ್ನೂ ನೀಡಿಲ್ಲ” ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕೂಡಾ ಚುನಾವಣಾ ಆಯೋಗದ ನಿರ್ಲಕ್ಷ್ಯವನ್ನು ಟೀಕಿಸಿದರು. “ಆಳಂದ ಕ್ಷೇತ್ರದ ಮತ ಕಳವು ಪ್ರಯತ್ನ ಕುರಿತು ಭಾರತದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರೂ ಸ್ಪಂದನೆ ಸಿಕ್ಕಿಲ್ಲ. ಆರೋಪಿಗಳನ್ನು ಪತ್ತೆಹಚ್ಚಲು ಸಹ ಆಯೋಗ ಸಹಕರಿಸಲಿಲ್ಲ” ಎಂದು ಅವರು ಆರೋಪಿಸಿದರು.

Related Articles

Leave a Reply

Your email address will not be published. Required fields are marked *

Back to top button