ಗಿಡ ನೆಟ್ಟು ಫೋಟೋ, ಮರುದಿನ ಕಸದ ರಾಶಿ! ಜೇವರ್ಗಿಯಲ್ಲಿ ಪರಿಸರ ದಿನಾಚರಣೆ ಪ್ರಶ್ನಾರ್ಹ

ಜೇವರ್ಗಿ: ವಿಶ್ವ ಪರಿಸರ ದಿನಾಚರಣೆಯಂದು ಪರಿಸರ ಸಂರಕ್ಷಣೆ, ಸ್ವಚ್ಛತೆ ಹಾಗೂ ಹಸಿರು ವಾತಾವರಣದ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರತಿಜ್ಞೆ ಕೈಗೊಂಡಿದ್ದರೂ, ಮರುದಿನವೇ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಎದುರು ಘನ ತ್ಯಾಜ್ಯ ಹಾಗೂ ವೈದ್ಯಕೀಯ ತ್ಯಾಜ್ಯದ ರಾಶಿ ಕಂಡುಬಂದಿರುವುದು ಪರಿಸರ ದಿನಾಚರಣೆಯ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ.
ಸಾರ್ವಜನಿಕರ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಈ ತ್ಯಾಜ್ಯ ಹಲವು ದಿನಗಳಿಂದ ಅಲ್ಲಿಯೇ ಬಿದ್ದಿದ್ದರೂ ಪುರಸಭೆ, ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಪಟ್ಟಣದ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಯ ಹೊಣೆ ಹೊತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಚ್ಛ ಭಾರತ ಅಭಿಯಾನ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ, ಸ್ಥಳೀಯ ಮಟ್ಟದಲ್ಲಿ ಅವುಗಳ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂಬುದು ಈ ಘಟನೆ ಮೂಲಕ ಸ್ಪಷ್ಟವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಿಗೂ ಕೆಟ್ಟ ಹೆಸರು ಬರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದಲ್ಲದೆ, ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯ ಮೇಲೂ ಅನುಮಾನ ವ್ಯಕ್ತವಾಗಿದ್ದು, ಆರೋಗ್ಯ ಇಲಾಖೆ ಸಮರ್ಪಕ ಪರಿಶೀಲನೆ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅನಧಿಕೃತ ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪರಿಸರ ದಿನಾಚರಣೆಯಂದು ಗಿಡ ನೆಡುವ ಕಾರ್ಯಕ್ರಮಗಳಿಗಿಂತ ಪರಿಸರ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಎಪಿಎಂಸಿ ಆವರಣದಲ್ಲಿನ ಈ ತ್ಯಾಜ್ಯದ ರಾಶಿ ಕೇವಲ ಕಸದ ಸಮಸ್ಯೆಯಲ್ಲ; ಇದು ಸ್ಥಳೀಯ ಆಡಳಿತದ ನಿರ್ಲಕ್ಷ್ಯ, ಜವಾಬ್ದಾರಿಯ ಕೊರತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿನ ವೈಫಲ್ಯದ ಪ್ರತೀಕವಾಗಿದೆ.
ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ತ್ಯಾಜ್ಯವನ್ನು ತೆರವುಗೊಳಿಸಬೇಕು. ಜೊತೆಗೆ ತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




