ನೂರು ಮಣಿಕಂಠ ಬಂದರೂ ಪ್ರಿಯಾಂಕ್ ಖರ್ಗೆ ಸೋಲಿಸುವುದು ಸಾಧ್ಯವಿಲ್ಲ: ದೇವಿಂದ್ರ ಯಾಬಾಳ
ಮಣಿಕಂಠ ವಿರುದ್ಧ ಯುವ ಕಾಂಗ್ರೆಸ್ ವಾಗ್ದಾಳಿ

ಚಿತ್ತಾಪುರ: “ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವುದೇ ನನ್ನ ಅಜೆಂಡಾ” ಎಂದು ಹೇಳಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಯುವ ಕಾಂಗ್ರೆಸ್ ಅಧ್ಯಕ್ಷ ದೇವಿಂದ್ರ ಯಾಬಾಳ ತೀವ್ರ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಅವರು, “ಇಂತಹ ನೂರು ಮಣಿಕಂಠ ರಾಠೋಡ್ ಬಂದರೂ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವುದು ಸಾಧ್ಯವಿಲ್ಲ. ಅವರು ತಿರುಕನ ಕನಸು ಕಾಣುತ್ತಿದ್ದಾರೆ” ಎಂದು ಟೀಕಿಸಿದರು.
ಚಿತ್ತಾಪುರ ಕ್ಷೇತ್ರ ಹಾಗೂ ಕಲಬುರಗಿ ಜಿಲ್ಲೆಗೆ ಮಣಿಕಂಠ ರಾಠೋಡ್ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, “ದಲಿತರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಅಥವಾ ನೊಂದವರ ಪರವಾಗಿ ಯಾವತ್ತಾದರೂ ಹೋರಾಟ ನಡೆಸಿದ್ದೀಯಾ?” ಎಂದು ಪ್ರಶ್ನಿಸಿದರು.
“ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಸರ್ಕಾರದ ವಿವಿಧ ಯೋಜನೆಗಳಿಗೆ ಬೇಕಾದ ಗುರುತಿನ ಚೀಟಿಗಳು ಮತ್ತು ಪ್ರಮಾಣಪತ್ರಗಳನ್ನು ಉಚಿತವಾಗಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದೀರಿ. ಈಗ ಮೂರು ವರ್ಷಗಳ ನಂತರ ಕ್ಷೇತ್ರ ನೆನಪಾಗಿದೆ” ಎಂದು ಆರೋಪಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಮಾತನಾಡಿದ ಅವರು, “ಜಿಲ್ಲೆ ಹಾಗೂ ರಾಜ್ಯದಲ್ಲಿ ಅವರು ಯಾರಿಗೂ ತೊಂದರೆ ನೀಡಿಲ್ಲ, ಗುಂಡಾಗಿರಿ ಮಾಡಿಲ್ಲ. ಅವರು ಪ್ರಬುದ್ಧ ರಾಜಕಾರಣ ಮಾಡುತ್ತಿದ್ದು, ವಿದ್ಯಾರ್ಥಿಗಳು, ರೈತರು ಮತ್ತು ನೊಂದವರ ಪರ ಕೆಲಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಯ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ” ಎಂದು ಟಾಂಗ್ ನೀಡಿದರು.
ಕಳೆದ ಚುನಾವಣೆಯಲ್ಲಿ ಷಡ್ಯಂತ್ರದಿಂದ ಸೋಲಾಗಿದೆ ಎಂಬ ಮಣಿಕಂಠ ಹೇಳಿಕೆಯನ್ನು ತಳ್ಳಿ ಹಾಕಿದ ಅವರು, “ಜನರ ತೀರ್ಪಿಗೆ ತಲೆಬಾಗಬೇಕು. ವೈಯಕ್ತಿಕ ಟೀಕೆ ಮಾಡಬಾರದು. ಪಕ್ಷದ ಆಧಾರದಲ್ಲೇ ಮತಗಳು ಬಂದಿವೆ, ವ್ಯಕ್ತಿಗಲ್ಲ” ಎಂದು ಹೇಳಿದರು.
“ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಸುಗಳು ಹಾಗೂ ಗಡಿಪಾರು ಅನುಭವಿಸಿರುವ ನೀವು, ಸುಖಸುಮ್ಮನೆ ಸಚಿವರ ವಿರುದ್ಧ ಆರೋಪ ಮಾಡುತ್ತಿರುತ್ತೀರಿ. ವಯಸ್ಸಿಗೆ ತಕ್ಕಂತೆ ಮಾತನಾಡಬೇಕು” ಎಂದು ಕಿವಿಮಾತು ಹೇಳಿದರು.
ಕ್ಷೇತ್ರದಲ್ಲಿ ಸ್ವಾಗತ ಕುರಿತು ಮಾಡಿರುವ ಹೇಳಿಕೆಗಳನ್ನೂ ಪ್ರಶ್ನಿಸಿದ ಅವರು, “ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ಇಷ್ಟು ದಿನ ಎಲ್ಲಿದ್ದರು? ಜನರು ನಿಮ್ಮನ್ನು ಮನೆ ಮಗನಂತೆ ಸ್ವಾಗತಿಸುತ್ತಾರೆ ಎಂಬುದು ಅಸಂಬದ್ಧ” ಎಂದು ಹೇಳಿದರು.
ಇನ್ನೂ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆಯನ್ನು ಉಲ್ಲೇಖಿಸಿ, “ಚಿತ್ತಾಪುರಕ್ಕೆ ಹೊಸ ನಾಯಕತ್ವ ನೀಡಲಾಗುವುದು ಎಂದು ಈಗಾಗಲೇ ಸೂಚನೆ ನೀಡಿದ್ದಾರೆ. ಹೀಗಿರುವಾಗ ಟಿಕೆಟ್ ಸಿಗುವ ಭರವಸೆಯೇ ಇಲ್ಲದ ನೀವು ಸೋಲಿಸುವ ಮಾತು ಮಾಡುವುದು ಅಸಂಗತ” ಎಂದು ಟೀಕಿಸಿದರು.
“ಮೊದಲು ಟಿಕೆಟ್ ಪಡೆದುಕೊಳ್ಳಿ, ನಂತರ ಸೋಲಿಸುವ ಬಗ್ಗೆ ಮಾತನಾಡಿ” ಎಂದು ಅವರು ಸವಾಲು ಹಾಕಿದರು.


