ಕಲಬುರಗಿ|ಗುಂಡಿನ ದಾಳಿ: ವ್ಯಕ್ತಿಯ ಬರ್ಬರ ಹತ್ಯೆ, ಹಳೆಯ ವೈಷಮ್ಯ ಶಂಕೆ

ಚಿತ್ತಾಪುರ: ತಾಲೂಕಿನ ವಾಡಿ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ದುಷ್ಕರ್ಮಿಗಳ ಗುಂಡಿನ ದಾಳಿಗೆ ಒಳಗಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಭಾಯ್ ಭಾಯ್ ಗ್ರೂಪ್ ಅಧ್ಯಕ್ಷ ಮಹ್ಮದ್ ಇರ್ಫಾನ್ (40) ಮೃತರು. ಬಲರಾಮ್ ಚೌಕ್ನಿಂದ ಸ್ಕೂಟಿ ಮೇಲೆ ವಾಡಿ ಕಡೆಗೆ ತೆರಳುತ್ತಿದ್ದ ಇರ್ಫಾನ್ ಅವರನ್ನು ದುಷ್ಕರ್ಮಿಗಳು ತಡೆದಿದ್ದಾರೆ. ಎದುರಿನಿಂದ ಕಾರಿನಲ್ಲಿ ಬಂದ ಅವರು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಇರ್ಫಾನ್ ಕೆಳಗೆ ಬೀಳುತ್ತಿದ್ದಂತೆ ಗುಂಡು ಹಾರಿಸಿರುವುದಾಗಿ ತಿಳಿದುಬಂದಿದೆ.
ಗಾಯಗೊಂಡ ಇರ್ಫಾನ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮಚ್ಚು ಹಾಗೂ ಚಾಕುವಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆಗೈದಿದ್ದಾರೆ ಎನ್ನಲಾಗಿದೆ.
ಘಟನೆಯ ನಂತರ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿಗಳ ವಾಹನ ಆತುರದಲ್ಲಿ ಗುಂಡಿಗೆ ಬಿದ್ದಿದ್ದು, ಬಳಿಕ ಕಾರನ್ನು ಸ್ಥಳದಲ್ಲೇ ಬಿಟ್ಟು ಮತ್ತೊಂದು ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಳೆಯ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣದ ಮಾಹಿತಿ ಕಲೆಹಾಕಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




