ಅಂಬಿಗರ ಚೌಡಯ್ಯ ಮೂರ್ತಿ ಅವಮಾನಕ್ಕೆ ಆಕ್ರೋಶ: ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ

ಕಲಬುರಗಿ: ಜಿಲ್ಲೆಯ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಇದೇ ವರ್ಷ ಸ್ಥಾಪನೆಗೊಂಡು ಉದ್ಘಾಟನೆಯಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ದುಷ್ಕರ್ಮಿಗಳು ನಿನ್ನೆ ರಾತ್ರಿ ಭಗ್ನಗೊಳಿಸಿರುವ ಘಟನೆ ಖಂಡಿಸಿ ನಗರದ ರಾಮಮಂದಿರ ವೃತ್ತದಲ್ಲಿ ಕೋಲಿ-ಕಬ್ಬಲಿಗ ಸಮಾಜದ ಸದಸ್ಯರು ಜಮಾಯಿಸಿ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶಭರಿತ ಪ್ರತಿಭಟನೆ ನಡೆಸಿದರು.
“ನಿಜಶರಣ ಶ್ರೀ ಅಂಬಿಗರ ಚೌಡಯ್ಯರು ಮಹಾನ್ ಶರಣರು. ಅವರು ಯಾವುದಕ್ಕೂ ಸೀಮಿತ ವ್ಯಕ್ತಿಗಳಲ್ಲ, ಸಮಸ್ತ ಮಾನವ ಸಮಾಜಕ್ಕೆ ಮಾರ್ಗದರ್ಶಕರು. ಅವರ ಮೂರ್ತಿಯನ್ನು ಭಗ್ನಗೊಳಿಸಿರುವುದು ಕೋಲಿ-ಕಬ್ಬಲಿಗ ಸಮಾಜದ ಭಾವನೆಗೆ ನೇರದಾಳಿ ಮಾಡಿದಂತಾಗಿದೆ. ಇಂತಹ ಕೃತ್ಯಗಳು ಸಮಾಜದಲ್ಲಿ ವಿಭಜನೆ ಮೂಡಿಸಲು ಪ್ರಯತ್ನಿಸುವ ದುಷ್ಕೃತ್ಯಕಾರರ ಕೆಲಸ. ಸರ್ಕಾರ ಮತ್ತು ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು,” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
“ಮುತ್ತಗಾ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಸರ್ಕಾರದ ಸಹಕಾರದೊಂದಿಗೆ ತಕ್ಷಣ ಪುನಃ ನಿರ್ಮಿಸಬೇಕು. ಈ ಘಟನೆಗೆ ಕಾರಣರಾದವರ ವಿರುದ್ಧ ಮಾದರಿ ಕ್ರಮ ಕೈಗೊಂಡಾಗ ಮಾತ್ರ ಇಂತಹ ಕೃತ್ಯಗಳು ಮರುಕಳಿಸುವುದಿಲ್ಲ,” ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅವ್ವನ ಮ್ಯಾಕೇರಿ, ಲಚ್ಚಪ್ಪ ಜಮಾದಾರ, ಶರಣಪ್ಪ ತಳವಾರ, ಪ್ರೇಮ ಕೋಲಿ, ಶಿವು ದಣಿ, ನಿಂಗಪ್ಪ ಆರ್. ದೇವನಗಾವ್, ದೇವೇಂದ್ರ ಚಿಗರಹಳ್ಳಿ, ಸಂತೋಷ್ ಬೆನ್ನೂರ್, ಸಂತೋಷ್ ತಳವಾರ್, ನಾಗರಾಜ ನಂದು ಸೇರಿದಂತೆ ಅನೇಕರು ಭಾಗವಹಿಸಿದರು.