ಫೆ.23–24ರಂದು ಸಾವೂರಲ್ಲಿ ಶ್ರೀ ಭೋಜಲಿಂಗೇಶ್ವರ 31ನೇ ಜಾತ್ರಾ ಮಹೋತ್ಸವ

ಯಾದಗಿರಿ: ಶಹಾಪೂರ ತಾಲೂಕಿನ ಸಾವೂರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಾವೂರ ಮಠದ ಪೂಜ್ಯ ಶ್ರೀ ಶರಭಯ್ಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಸಚಿದಾನಂದ ನಿತ್ಯ ನಿರಂಜನ ಮೂರ್ತಿ ಸ್ವಯಂಸಿದ್ಧ ಶ್ರೀ ಶ್ರೀ ಶ್ರೀ ಭೋಜಲಿಂಗೇಶ್ವರರ 31ನೇ ಜಾತ್ರಾ ಮಹೋತ್ಸವವನ್ನು ಫೆಬ್ರವರಿ 23 ಮತ್ತು 24ರಂದು ಭಕ್ತಿಭಾವದಿಂದ ಆಚರಿಸಲಾಗುತ್ತದೆ.
ಫೆಬ್ರವರಿ 23ರಂದು ಸೋಮವಾರ ಸಂಜೆ 6:30ಕ್ಕೆ ಉಚ್ಚಾಯೋತ್ಸವ ನಡೆಯಲಿದೆ. ಫೆಬ್ರವರಿ 24ರಂದು ಮಂಗಳವಾರ ಬೆಳಿಗ್ಗೆ 6:30ಕ್ಕೆ ಶ್ರೀ ಭೋಜಲಿಂಗೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಮುಂಜಾನೆ 9:15ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಉಸುಕಿನ ಚೀಲ ಎತ್ತುವ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಪ್ರಥಮ ಬಹುಮಾನ ರೂ.5,000 ಹಾಗೂ ದ್ವಿತೀಯ ಬಹುಮಾನ ರೂ.1,100 ನೀಡಲಾಗುತ್ತದೆ. ಸಂಜೆ 6:30ಕ್ಕೆ ರಥೋತ್ಸವ ಹಾಗೂ ರಾತ್ರಿ 7:30ಕ್ಕೆ ಧರ್ಮಸಭೆ ಜರುಗಲಿದೆ.
ಧರ್ಮಸಭೆಯನ್ನು ಕೂಚಬಾಳ ಭೀಮಾಶಂಕರ ಮಠದ ಪೂಜ್ಯ ಶ್ರೀ ಪದ್ಮನಾಭ ಗುರೂಜಿ ಉದ್ಘಾಟಿಸುವರು. ಶಹಾಪೂರ ಚರಬಸವೇಶ್ವರ ಸಂಸ್ಥಾನ ಗದ್ದಗೆ ಮಠದ ಪೂಜ್ಯ ಶ್ರೀ ಬಸವಯ್ಯ ಶರಣರು ಸಮ್ಮುಖ ವಹಿಸುವರು. ಸಾವೂರ ಭೋಜಲಿಂಗೇಶ್ವರ ಮಠದ ಪೂಜ್ಯ ಶ್ರೀ ಶರಭಯ್ಯ ಶರಣರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಬಾಲಯೋಗಿ ಭೋಜಲಿಂಗ ಸ್ವಾಮಿಗಳು ಆಶೀರ್ವಚನ ನೀಡುವರು.
ಕಾರ್ಯಕ್ರಮದಲ್ಲಿ ಕ.ರ.ಮ.ಸಂ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಾಪೂರ, ನಿವೃತ್ತ ಪ್ರಾಧ್ಯಾಪಕ ಡಾ. ಎ.ಪಿ. ಹೊಸಮನಿ, ಡಾ. ಭೀಮಣ್ಣ ಮೇಟಿ, ಶಹಾಪೂರ ಸಿಪಿಐ ಎಸ್.ಎಂ. ಪಾಟೀಲ್, ನ್ಯಾಯವಾದಿ ವಿಶ್ವನಾಥ ರಡ್ಡಿ ಸಾಹು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಲಿಂಗ ರಡ್ಡಿ ಸಾಹು ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿವಿಧ ಸಂಘಟನೆಗಳ ಮುಖಂಡರು, ಗ್ರಾಮೀಣ ನಾಯಕರು ಹಾಗೂ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಾವೂರ, ಕಾಟಮಳ್ಳಿ, ಬಿರನೂರ, ಪರಸಾಪೂರ, ಹತ್ತಿಗುಡೂರ, ಕೊಂಗಂಡಿ, ಮಂಡಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗುರುಹಿರಿಯರು, ಎಲ್ಲಾ ಧರ್ಮಗಳ ಮುಖಂಡರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸದ್ಭಕ್ತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.



