ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಮೇಟಿ ಆಗ್ರಹ

ಕಲಬುರಗಿ: ನಗರದ ತಾರಫೈಲ್ ಬಡಾವಣೆಯಲ್ಲಿ ಮನೆ ವಿಚಾರವಾಗಿ ತಾಯಿ–ಮಗಳ ಮೇಲೆ ಹಲ್ಲೆ ಹಾಗೂ ಜೀವ ಬೆದರಿಕೆ ನೀಡಿದ ಪ್ರಕರಣದಲ್ಲಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ನೊಂದ ಮಹಿಳೆ ಬಸಲಿಂಗಮ್ಮ ತಳವಾರ ಮತ್ತು ಮಗಳು ಭಾರತಿ ತಳವಾರ ಒತ್ತಾಯಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗರಾಜ ಕಟ್ಟಿಮನಿ ಅಲಿಯಾಸ್ ಲಿಂಗರಾಜ ತಾರಫೈಲ್ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, 17 ದಿನಗಳು ಕಳೆದರೂ ಬಂಧನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಕಲಚೇತನ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಮೇಟಿ ಮಾತನಾಡಿ, ಆರೋಪಿಗಳು ಬಸಲಿಂಗಮ್ಮ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ತಾಯಿಯನ್ನು ರಕ್ಷಿಸಲು ಬಂದ ಮಗಳು ಭಾರತಿ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದರು.
ಬಸಲಿಂಗಮ್ಮ ಅವರು ಕಳೆದ 25 ವರ್ಷಗಳಿಂದ ಪತಿಯಿಂದ ದೂರವಿದ್ದು, ತಾರಫೈಲ್ ಬಡಾವಣೆಯಲ್ಲಿರುವ ತಾಯಿ ಮನೆನಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಸಂಬಂಧಿಕರು ಮನೆ ಖಾಲಿ ಮಾಡುವಂತೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.
ಮಾರ್ಚ್ 15, 16 ಹಾಗೂ 29ರಂದು ಆರೋಪಿಗಳು ಮನೆಗೆ ಬಂದು ಹಲ್ಲೆ ನಡೆಸಿ, ಮನೆ ಖಾಲಿ ಮಾಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಿಸಲು ಆರಂಭದಲ್ಲಿ ವಿಳಂಬವಾಗಿದ್ದು, ಬಳಿಕ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಆದರೂ ಆರೋಪಿಗಳ ಬಂಧನವಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುಂಡೇಶ ಶಿವನೂರ, ಉದಯಕುಮಾರ ಬೆಳಗುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




