ಸವಿತಾ ಸಮಾಜದ ಸದಸ್ಯತ್ವ ಕಾರ್ಡ್ ಹಾಗೂ ಕ್ಷೌರಿಕ ಕಾರ್ಮಿಕ ಕಾರ್ಡ್ ವಿತರಣೆ

ಕಲಬುರಗಿ: ನಗರದ ಸವಿತಾ ಮಹರ್ಷಿ ದೇವಸ್ಥಾನ ಆವರಣದಲ್ಲಿ ಸವಿತಾ ಸಮಾಜದ ಕಲಬುರಗಿ ಜಿಲ್ಲಾಧ್ಯಕ್ಷ ಆನಂದ ವಾರಿಕ ಅವರ ನೇತೃತ್ವದಲ್ಲಿ ನೂತನ ಸದಸ್ಯತ್ವ ನೋಂದಣಿಯಾದ ಸದಸ್ಯರಿಗೆ ಸದಸ್ಯತ್ವ ಕಾರ್ಡ್ ಹಾಗೂ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ವಲಯದ ಅಂಬೇಡ್ಕರ ಸಹಾಯಹಸ್ತ ಕ್ಷೌರಿಕರ ಕಾರ್ಮಿಕ ಕಾರ್ಡ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಶರಣಗೌಡ ಮಾತನಾಡಿ, ಕಾರ್ಮಿಕರಿಗೆ ಲಭ್ಯವಿರುವ ವಿವಿಧ ಸರ್ಕಾರಿ ಸೌಲಭ್ಯಗಳ ವಿವರ ನೀಡಿದರು. ಇತ್ತೀಚೆಗೆ ಸೇಡಂ ಪಟ್ಟಣದಲ್ಲಿ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ಮಂಜೂರಾದ ₹1 ಲಕ್ಷ ಪರಿಹಾರದ ಆದೇಶ ಪತ್ರವನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ತುಕ್ಕಾರೆಡ್ಡಿ ಮಾತನಾಡಿ, ಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಅನೇಕ ಯೋಜನೆಗಳ ಸದುಪಯೋಗ ಪಡೆಯುವಂತೆ ಮನವರಿಕೆ ಮಾಡಿಸಿದರು.
ಕಲಬುರಗಿ ನಗರ, ಸೇಡಂ, ಚಿತ್ತಾಪುರ, ವಾಡಿ, ಅಫಜಲಪುರ, ಕಾಳಗಿ ಸೇರಿದಂತೆ ವಿವಿಧ ಪ್ರದೇಶಗಳ ಸವಿತಾ ಸಮಾಜದ ಸದಸ್ಯರಿಗೆ ಒಟ್ಟು ಐದು ನೂರಕ್ಕೂ ಹೆಚ್ಚಿನ ಕಾರ್ಡ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲ ಹಾಗೂ ಸಮಾಜ ಸೇವಕರಾದ ಸೂರ್ಯಕಾಂತ ನಿಂಬಾಳ್ಕರ್, ಕಾರ್ಮಿಕ ಹೋರಾಟಗಾರ ಸುನೀಲ ಮಾನ್ಪಡೆ, ಸುಭಾಷ್ ಬಾದಾಮಿ, ಮದನ ಗದವಾಲ, ಮಲ್ಲಿಕಾರ್ಜುನ ಮಾನೆ, ಅಶೋಕ ಡೈಮಂಡ್, ಜ್ಯೋತಿ ಅಡಿಕೆ, ಮಹೇಶ ಪಾಣೇಗಾಂವ, ವಿದ್ಯಾಸಾಗರ ಹಾಬಾಳ, ಸೂರ್ಯಕಾಂತ ಬೆಣ್ಣೂರ, ನರಸಿಂಹಲು ಅಡಕಿ, ಚಂದ್ರು ಗೋಗಿ, ಖಂಡಪ್ಪ ಮಲ್ಲಾ, ಸೂರ್ಯಕಾಂತ ಮಾನೆ, ಅಂಬು ರೋಜಾ, ಬಸವರಾಜ ಕನವಳ್ಳಿ, ಅನೀಲಕುಮಾರ ಗೋಗಿ, ಅಂಬರೀಷ್ ಇಟಗಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



