ಜಿಲ್ಲಾಸುದ್ದಿಯಾದಗಿರಿ

ತಳಕ ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆ: ಸಾಂಕ್ರಾಮಿಕ ರೋಗ ಭೀತಿ, ಉಮೇಶ ಕೆ. ಮುದ್ನಾಳ ಆರೋಪ

ಯಾದಗಿರಿ: ತಾಲೂಕಿನ ತಳಕ ಗ್ರಾಮದಲ್ಲಿ ಸಮರ್ಪಕ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಪ್ರಮುಖ ಬೀದಿಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ತಗ್ಗು ಗುಂಡಿಗಳಲ್ಲಿ ನೀರು ನಿಂತಿದ್ದು, ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುವಂತಾಗಿದೆ. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರೂ ಇಲ್ಲವೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ.

ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, 2021–22ನೇ ಸಾಲಿನಲ್ಲಿ ಗ್ರಾಮದಲ್ಲಿ ಕೈಗೊಳ್ಳಬೇಕಿದ್ದ ಎರಡು ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. ಬಸವನ ಗುಡಿಯಿಂದ ಹಳ್ಳದವರೆಗೆ ಸಿ.ಸಿ. ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಲ್ ನಂ. 309 (ರೂ.42,560) ಹಾಗೂ ಬಿಲ್ ನಂ. 3515 (ರೂ.41,440) ಮತ್ತು ಬಸವನ ಕಟ್ಟಿ ಸಮೀಪ ದನಕರಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಲ್ ನಂ. 310 (ರೂ.24,610) ಹಾಗೂ ಬಿಲ್ ನಂ. 3516 (ರೂ.7,817) ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳದೆ ಸಂಪೂರ್ಣ ಹಣ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಪಿಡಿಒ ಭೂಪ ನೀಲಕಂಠ ಅವರ ವಿರುದ್ಧ ಮೇಲಾಧಿಕಾರಿಗಳು ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಶಾಮೀಲಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಉಮೇಶ ಕೆ. ಮುದ್ನಾಳ ಟೀಕಿಸಿದರು.

ಚರಂಡಿ ನೀರು ದುರ್ವಾಸನೆ ಬೀರುತ್ತಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮಲೇರಿಯಾ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ತಕ್ಷಣವೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪವನ, ಸೋನು ರಾಠೋಡ, ಗಂಗಣ್ಣ, ಯಲ್ಲಪ್ಪ, ದ್ಯಾವಣ್ಣ, ಮಹೇಶ, ಮುದಕಪ್ಪ, ಶಿವಪ್ಪ, ಯಲ್ಲಮ್ಮ, ಗಿರೆಮ್ಮ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button