ಕಲಬುರಗಿಜಿಲ್ಲಾಸುದ್ದಿ

ಅಮೇರಿಕಾ–ಇಸ್ರೇಲ್ ಯುದ್ಧ ನೀತಿ ಖಂಡಿಸಿ: ಎಡಪಕ್ಷಗಳ ಪ್ರತಿಭಟನೆ

ಕಲಬುರಗಿ: ಅಮೇರಿಕಾ ಮತ್ತು ಇಸ್ರೇಲ್‌ನ ಯುದ್ಧಖೋರ ನೀತಿಯನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ), ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಹಾಗೂ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಗುರುವಾರ ನಗರದ ತಿಮ್ಮಾಪುರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಅಮೇರಿಕಾ ಸಾಮ್ರಾಜ್ಯಶಾಹಿಯ ಬೆಂಬಲದೊಂದಿಗೆ ಇಸ್ರೇಲ್ ಇರಾನ್ ಮೇಲೆ ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ‘ಮುನ್ನೆಚ್ಚರಿಕೆಯ ದಾಳಿ’ ಎಂಬ ಆಧಾರರಹಿತ ಕಾರಣ ನೀಡಿ ನಡೆಸಿದ ಈ ದಾಳಿ ಜಗತ್ತಿನಲ್ಲಿ ಯುದ್ಧದ ಭೀತಿಯನ್ನು ಹೆಚ್ಚಿಸುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೇರಿಕಾ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. “ಯುದ್ಧ ಬೇಡ, ಶಾಂತಿ ಬೇಕು” ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾ. ಮಹೇಶ್ ರಾಠೋಡ್ ಅವರು, ಅಮೇರಿಕನ್ ಸಾಮ್ರಾಜ್ಯಶಾಹಿ ವಿವಿಧ ದೇಶಗಳ ಸಾರ್ವಭೌಮತ್ವದ ಮೇಲೆ ಸೇನಾ ಹಸ್ತಕ್ಷೇಪ ಮಾಡಿ ನಾಗರಿಕರ ಮೇಲೆ ದಾಳಿ ನಡೆಸುತ್ತಿರುವುದು ಮಾನವೀಯತೆಯ ವಿರುದ್ಧವಾಗಿದೆ. ಮಕ್ಕಳನ್ನೂ ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ನೂರಾರು ಮಕ್ಕಳು ಸಾವನ್ನಪ್ಪಿರುವುದು ವಿಷಾದನೀಯ ಎಂದು ಹೇಳಿದರು. ಕೂಡಲೇ ಯುದ್ಧ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಎಸ್‌ಯುಸಿಐ(ಸಿ) ಜಿಲ್ಲಾ ಮುಖಂಡರಾದ ಕಾ. ನಾಗಮ್ಮಾಳ ಮಾತನಾಡಿ ಯುದ್ಧ ರಾಜಕಾರಣವನ್ನು ಜಗತ್ತಿನಾದ್ಯಂತ ಖಂಡಿಸಲಾಗುತ್ತಿದೆ ಎಂದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಮಾತನಾಡಿ, ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧ ರಾಜಕಾರಣ ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ. ಭಾರತ ಸರ್ಕಾರವು ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಬೇಕು. ಆದರೆ ಇಸ್ರೇಲ್ ಪರ ನಿಲುವು ತಾಳಿರುವುದು ದೇಶದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಭಾರತವು ಇಸ್ರೇಲ್‌ನೊಂದಿಗೆ ಇರುವ ರಾಜತಾಂತ್ರಿಕ ಸಂಬಂಧಗಳನ್ನು ಪುನರ್‌ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿ. ನಾಗಮ್ಮಾಳ, ಭೀಮಾಶಂಕರ್ ಮಾಡ್ಯಾಳ, ಭೀಮಶೆಟ್ಟಿ ಯಂಪಳ್ಳಿ, ಶ್ರೀಮಂತ ಬಿರಾದಾರ, ಪ್ರಭುದೇವ ಯಳಸಂಗಿ, ಎಸ್.ಎಂ. ಶರ್ಮ, ಮಹೇಶ್ ಎಸ್.ಬಿ., ಡಾ. ಸೀಮಾ ದೇಶಪಾಂಡೆ, ಲವಿತ್ರ ವಸ್ತ್ರದ್, ಪಾಂಡುರಂಗ ಮಾವಿನಕರ್, ಶಾಂತಾ ಘಂಟಿ, ಕೋದಂಡರಾಮಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button