ಮೇ 30ರಂದು ರಾಜ್ಯಾದ್ಯಂತ ‘ಕರ್ನಾಟಕ ಪ್ರತಿರೋಧ’: SIR ವಿರುದ್ಧ ಪ್ರಜಾತಾಂತ್ರಿಕ ಹೋರಾಟಕ್ಕೆ ಕರೆ

ಕಲಬುರಗಿ: ಮತದಾರರ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಕೋಟ್ಯಾಂತರ ಜನರ ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ, ಮೇ 30ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊದಲ ಸುತ್ತಿನ “ಕರ್ನಾಟಕ ಪ್ರತಿರೋಧ” ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮಣ ಮಂಡಲಗೇರಾ, “ಇದು ಬಿಹಾರವೂ ಅಲ್ಲ, ಬಂಗಾಳವೂ ಅಲ್ಲ, ಬಸವಣ್ಣರ ಕರ್ನಾಟಕ. ಇಲ್ಲಿ ಜನರ ಮತದಾನದ ಹಕ್ಕಿಗೆ ಧಕ್ಕೆ ತರುವ ಯಾವುದೇ ನೀತಿಯನ್ನು ಸಹಿಸುವುದಿಲ್ಲ” ಎಂದು ಹೇಳಿದರು.
ದೇಶದ ವಿವಿಧ ರಾಜ್ಯಗಳಲ್ಲಿ SIR ಪ್ರಕ್ರಿಯೆ ಮೂಲಕ ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ದಾಖಲೆಗಳ ಸಣ್ಣಪುಟ್ಟ ವ್ಯತ್ಯಾಸವನ್ನೇ ನೆಪವನ್ನಾಗಿ ಮಾಡಿಕೊಂಡು ಅರ್ಹ ಮತದಾರರ ಮತದಾನದ ಹಕ್ಕು ಕಸಿಯಲಾಗುತ್ತಿದೆ ಎಂದು ಅವರು ಆರೋಪಿಸಿದರು.2002ರ ಮತದಾರರ ಪಟ್ಟಿಯ ದಾಖಲೆ ಅಥವಾ ಪೋಷಕರ ವಿವರಗಳನ್ನು ಕಡ್ಡಾಯಗೊಳಿಸಿರುವುದು ಬಡವರು, ಗ್ರಾಮೀಣರು, ಅಲೆಮಾರಿ ಸಮುದಾಯಗಳು, ದಲಿತರು, ಆದಿವಾಸಿಗಳು ಹಾಗೂ ವಿವಾಹಿತ ಮಹಿಳೆಯರಿಗೆ ಸಂಕಷ್ಟ ಉಂಟುಮಾಡುತ್ತಿದೆ. “ಲಾಜಿಕಲ್ ಡಿಸ್ಕ್ರೆಪೆನ್ಸಿ” ಹೆಸರಿನ ಸಾಫ್ಟ್ವೇರ್ ಬಳಸಿ ಜನರನ್ನು ಅನುಮಾನಾಸ್ಪದ ಮತದಾರರೆಂದು ಗುರುತಿಸುವ ಮೂಲಕ ಮತದಾನದ ಹಕ್ಕು ನಿರಾಕರಿಸಲಾಗುತ್ತಿದೆ ಎಂದು ದೂರಿದರು.
SIR ಪ್ರಕ್ರಿಯೆಯ ನಿಜವಾದ ಉದ್ದೇಶ ನುಸುಳುಕೋರರನ್ನು ಪತ್ತೆ ಹಚ್ಚುವುದಲ್ಲ. ವಿರೋಧ ಪಕ್ಷಗಳಿಗೆ ಬೆಂಬಲ ನೀಡುವ ಸಮುದಾಯಗಳ ಮತಗಳನ್ನು ಕಡಿತಗೊಳಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಇದಾಗಿದೆ ಎಂದು ಅವರು ಆರೋಪಿಸಿದರು.
“ಕರ್ನಾಟಕ ಪ್ರತಿರೋಧ”ದ ಮೂಲಕ ಜನವಿರೋಧಿ SIR ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು, ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸಬೇಕು, ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳ ಮೂಲಕ ಸಾರ್ವಜನಿಕ ಪರಿಶೀಲನೆ ನಡೆಸಬೇಕು ಮತ್ತು ಜನರಿಗೆ ದಾಖಲೆಗಳನ್ನು ಸಲ್ಲಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವೂ ಈ ವಿಚಾರದಲ್ಲಿ ಗಂಭೀರವಾಗಿ ಮಧ್ಯಪ್ರವೇಶಿಸಿ, ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು. ವಿಶೇಷ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳನ್ನು ಕರೆದು ಎಲ್ಲಾ ಅರ್ಹ ಮತದಾರರಿಗೆ “ಸ್ಮಾರ್ಟ್ ಕಾರ್ಡ್” ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
“ಕರ್ನಾಟಕ ಪ್ರತಿರೋಧ”ವು ಮತದಾನದ ಹಕ್ಕು ಹಾಗೂ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ನಡೆಯುತ್ತಿರುವ ಪ್ರಜಾತಾಂತ್ರಿಕ ಹೋರಾಟವಾಗಿದ್ದು, ಎಲ್ಲಾ ಜವಾಬ್ದಾರಿಯುತ ನಾಗರಿಕರು ಭಾಗವಹಿಸಬೇಕು ಎಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಭೀಮರಾವ್ ಟಿ.ಟಿ., ರೇಣುಕಾ ಸಿಂಗೆ, ಮೈಲಾರಿ ದೊಡ್ಡಮನಿ, ಸಲೀಂ ಆಹಮ್ಮದ್, ಮಹಾಂತಪ್ಪ ಸಂಗಾವಿ, ಬಾಲಾಜಿ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.




