ಜಾತಿ ಜನಗಣತಿಯಲ್ಲಿ ಕಬ್ಬಲಿಗ ಬರೆಯಿಸಲು ಮನವಿ

ಚಿತ್ತಾಪುರ: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕೋಲಿ-ಕಬ್ಬಲಿಗ ಸಮುದಾಯದವರು ತಮ್ಮ ಜಾತಿ ವಿವರಗಳನ್ನು ತಪ್ಪದೇ ಸರಿಯಾಗಿ ದಾಖಲಿಸಿಕೊಳ್ಳಬೇಕೆಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿದ ಅವರು, ಸಮೀಕ್ಷೆ ಮಾಡಲು ಮನೆ ಮನೆಗೆ ಬರುವ ಸಮೀಕ್ಷೆದಾರರಿಗೆ ಧರ್ಮ ಕೇಳಿದಾಗ “ಹಿಂದೂ” ಎಂದು, ಜಾತಿ ಕೇಳಿದಾಗ “ಕಬ್ಬಲಿಗ” ಎಂದು ಹಾಗೂ ಉಪ ಜಾತಿ ಕೇಳಿದಾಗ “ಕೋಲಿ” ಎಂದು ಬರೆಯಿಸಬೇಕು ಎಂದು ಸೂಚಿಸಿದರು.
ಅವರು ಮುಂದುವರಿದು, ಸಮೀಕ್ಷೆದಾರರು ಪೆನ್ಸಿಲ್ ಬಳಸಿದರೆ ತಕ್ಷಣ ಆಕ್ಷೇಪಿಸಿ ಪೆನ್ನಿನಿಂದಲೇ ಬರೆದುಕೊಳ್ಳುವಂತೆ ಒತ್ತಾಯಿಸಬೇಕು ಎಂದು ಹೇಳಿದರು. ಕಾಲಂ ನಂ. 11ರಲ್ಲಿ “ಕಬ್ಬಲಿಗ” ಜಾತಿಯ ಪರ್ಯಾಯ ಪದವಾಗಿ “ಟೋಕರೆ ಕೋಲಿ” ಎಂದು ಬರೆಯಿಸಬೇಕೆಂದು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ಶಾಲಾ ದಾಖಲೆಗಳಲ್ಲಿ ಇರುವಂತೆ ಜಾತಿ ವಿವರಗಳನ್ನು ನಮೂದಿಸಿಕೊಳ್ಳಬೇಕು. ಸಮೀಕ್ಷೆದಾರರು ತಪ್ಪಾಗಿ ದಾಖಲಿಸಿದರೆ, ಅದನ್ನು ಅಳಿಸಿ ಸರಿಯಾಗಿ ಬರೆದುಕೊಳ್ಳುವಂತೆ ತಕ್ಷಣವೇ ತಿಳಿಸಬೇಕು ಎಂದು ನಿಂಗಣ್ಣಾ ಹೆಗಲೇರಿ ಹೇಳಿದರು.