ಭಗತ್ ಸಿಂಗ್ ಹುತಾತ್ಮ ದಿನಾಚರಣೆ: ಎಐಡಿವೈಓ ಪಂಜಿನ ಮೆರವಣಿಗೆ

ಕಲಬುರಗಿ: ಶಹಿದ್ ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಅವರ 95ನೇ ಹುತಾತ್ಮ ದಿನಾಚರಣೆ ಅಂಗವಾಗಿ ಅಖಿಲ ಭಾರತ ಜನತಾಂತ್ರಿಕ ಯುವಜನ ಸಂಘಟನೆ (ಎಐಡಿವೈಓ) ವತಿಯಿಂದ ಸೋಮವಾರ ನಗರದಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಯಿತು.
ಮೆರವಣಿಗೆ ರೈಲು ನಿಲ್ದಾಣದಿಂದ ಆರಂಭವಾಗಿ ಎಸ್.ವಿ.ಪಿ. ವೃತ್ತದಲ್ಲಿ ಸಮಾಪ್ತಿಯಾಯಿತು. ಈ ವೇಳೆ ಮಾತನಾಡಿದ ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಬಡತನ, ನಿರುದ್ಯೋಗ, ಅಸಮಾನತೆ ಹಾಗೂ ಜಾತಿ–ಧರ್ಮ ವೈಷಮ್ಯಗಳಿಲ್ಲದ ಭಾರತ ನಿರ್ಮಾಣವು ಭಗತ್ ಸಿಂಗ್ ಅವರ ಕನಸಾಗಿತ್ತು ಎಂದು ಹೇಳಿದರು.
ಇಂದಿನ ಸಮಾಜದಲ್ಲಿ ಈ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆ, ಅವುಗಳ ವಿರುದ್ಧ ಹೋರಾಡಲು ಭಗತ್ ಸಿಂಗ್ ಅವರ ವಿಚಾರಗಳು ಇನ್ನಷ್ಟು ಪ್ರಸ್ತುತವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ಕೇವಲ 23ನೇ ವಯಸ್ಸಿನಲ್ಲಿ ಅಪಾರ ಜ್ಞಾನ ಸಂಪಾದಿಸಿ ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ಕ್ರಾಂತಿಕಾರಿಯಾಗಿದ್ದ ಭಗತ್ ಸಿಂಗ್ ಅವರ ಎದೆಗಾರಿಕೆಯನ್ನು ಯುವಜನರು ಅಳವಡಿಸಿಕೊಂಡು ಅಧ್ಯಯನದ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಅಧ್ಯಕ್ಷ ಜಗನ್ನಾಥ್ ಎಸ್.ಎಚ್. ಮಾತನಾಡಿ, 2004ರಲ್ಲಿ ಪದವೀಧರ ನಿರುದ್ಯೋಗ ಪ್ರಮಾಣ 32% ಇತ್ತರೆ, 2024ರಲ್ಲಿ ಅದು 67%ಕ್ಕೆ ಏರಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ಯುವಜನರನ್ನು ಕಡೆಗಣಿಸಿರುವ ಪರಿಣಾಮ ಲಕ್ಷಾಂತರ ಪದವೀಧರರು ಉದ್ಯೋಗಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಈ ಅನ್ಯಾಯದ ವಿರುದ್ಧ ಭಗತ್ ಸಿಂಗ್ ಅವರ ಚಿಂತನೆಗಳ ಆಧಾರದಲ್ಲಿ ಸಂಘಟನೆ ಪ್ರಬಲ ಚಳುವಳಿಯನ್ನು ಮುಂದುವರಿಸುತ್ತಿದ್ದು, ಹೆಚ್ಚಿನ ಯುವಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಸದಸ್ಯ ರಮೇಶ್ ದೇವಕರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಈಶ್ವರ್ ಕೆ ವಹಿಸಿದ್ದರು.ಮೆರವಣಿಗೆಯಲ್ಲಿ ರಘು ಪವಾರ್, ಪುಟ್ಟರಾಜ್, ಲಿಂಗಶೆಟ್ಟಿ, ಪ್ರಶಾಂತ್ ಹೊಸಮನಿ, ದೇವರಾಜ್ ಮಿರಲ್ಕರ್, ಶೇಖರ್ ಸಿಂಗ್, ಉಮೇಶ್ ಯಾದವ್ ಸೇರಿದಂತೆ ಹಲವರು ಭಾಗವಹಿಸಿದ್ದರು.



