ಕಲಬುರಗಿಜಿಲ್ಲಾಸುದ್ದಿ

ಪ್ರವಾಹದ ಅಬ್ಬರದಲ್ಲಿ ರೈತರ ನಲುಗಾಟ:ಜೆಡಿಎಸ್ ನಾಯಕರು ಹಾನಿಗೊಂಡ ಪ್ರದೇಶಗಳಿಗೆ ಭೇಟಿ

ಜೆಡಿಎಸ್ ನಾಯಕರು ಶೀಘ್ರ ಪರಿಹಾರ ಕ್ರಮ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಲಿದ್ದು, ಪ್ರವಾಹ ಮತ್ತು ಹಾನಿ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಯೋಜನೆ ರೂಪಿಸಲಾಗಿದೆ – ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ.

ಕಲಬುರಗಿ: ರಾಜ್ಯದ ಹಲವೆಡೆ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದ ಪರಿಣಾಮವಾಗಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗದ ಅನೇಕ ಜಿಲ್ಲೆಗಳಲ್ಲಿ ಜನ-ಜಾನುವಾರು, ಮನೆಗಳು ಹಾಗೂ ಬೆಳೆಗಳಿಗೆ ಅಪಾರ ಹಾನಿ ಉಂಟಾಗಿದೆ. ಭೀಮಾ ಹಾಗೂ ಅಮರ್ಜಾ ನದಿಗಳಿಗೆ ಮಹಾರಾಷ್ಟ್ರದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ನದಿಗಳು ಉಕ್ಕಿಹರಿದು ಅನೇಕ ಗ್ರಾಮಗಳು ನೀರಿನಡಿ ಮುಳುಗಿದ್ದು, ನೂರಾರು ಮಂದಿ ನಿರಾಶ್ರಿತರಾಗಿ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮುಂಗಾರು ಹಂಗಾಮಿನ ತೊಗರಿ, ಹತ್ತಿ, ಹೆಸರು, ಉದ್ದು, ಕಬ್ಬು ಸೇರಿದಂತೆ ತೋಟಗಾರಿಕಾ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ತೇವಾಂಶ ಹೆಚ್ಚಿರುವುದರಿಂದ ಹಿಂಗಾರು ಹಂಗಾಮಿನ ಬಿತ್ತನೆಗೂ ಅಸಾಧ್ಯ ಪರಿಸ್ಥಿತಿ ಎದುರಾಗಿದೆ. ರೈತರು ಬಿತ್ತನೆಗೂ ಮುನ್ನೇ ನಷ್ಟದಲ್ಲಿದ್ದು, ಕೃಷಿ ಆಧಾರಿತ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ.

ಈ ಹಿನ್ನೆಲೆದಲ್ಲಿ ಜೆಡಿಎಸ್ ಪಕ್ಷದ ರಾಜ್ಯಮಟ್ಟದ ತಂಡವು ಪ್ರವಾಹಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿಯವರ ನಿರ್ದೇಶನದ ಮೇರೆಗೆ ಬುಧವಾರ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿತು.

ತಂಡದಲ್ಲಿ ಪಕ್ಷದ ಶಾಸಕಾಂಗ ನಾಯಕ ಸುರೇಶ್ ಸಿ.ಬಿ., ಮಾಜಿ ಸಚಿವರು ಹಾಗೂ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮತ್ತು ದೇವದುರ್ಗ ಶಾಸಕಿ ಕರೆಮ್ಮ ನಾಯಕರ, ಕೊಪ್ಪಳದ ಜೆಡಿಎಸ್ ಮುಖಂಡ ಸಿ.ವಿ. ಚಂದ್ರಶೇಖರ, ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಹಾಗೂ ಹಲವಾರು ನಾಯಕರು ಉಪಸ್ಥಿತರಿದ್ದರು.

ಜೆಡಿಎಸ್ ನಾಯಕರ ತಂಡವು ಪ್ರವಾಹದಿಂದ ಹಾನಿಗೊಂಡ ರೈತರ ಹೊಲಗಳಿಗೆ ಭೇಟಿ ನೀಡಿ ಹತ್ತಿ ಬೆಳೆ ಹಾನಿ ವೀಕ್ಷಿಸಿ, ಸಂತ್ರಸ್ತ ರೈತರ ಅಹವಾಲುಗಳನ್ನು ಆಲಿಸಿತು. ಇದೇ ವೇಳೆ ಅಫಜಲಪುರ ತಾಲ್ಲೂಕಿನ ಬಸವಪಟ್ಟಣದ ರೈತ ಮರೆಪ್ಪ ಸಾಯಬಣ್ಣಾ ಬರ್ಮಾ ಅವರು ಪ್ರವಾಹ ಹಾಗೂ ಬೆಳೆ ಹಾನಿಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ, ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ರೂ.35 ಸಾವಿರ ಸಹಾಯಧನ ನೀಡಲಾಯಿತು.

ಸ್ಥಳೀಯ ಅಸಮಾಧಾನ
ಮರೆಪ್ಪ ಬರ್ಮಾ ಆತ್ಮಹತ್ಯೆ ಮಾಡಿಕೊಂಡ ದಿನ ಹಾಗೂ ನಂತರವೂ ಸ್ಥಳೀಯ ಶಾಸಕ ಪ್ರದೇಶದಲ್ಲಿದ್ದರೂ, ಮೃತಪಟ್ಟ ರೈತ ಕುಟುಂಬವನ್ನು ಭೇಟಿ ಮಾಡದೆ ನಿರ್ಲಕ್ಷ್ಯ ತೋರಿದರೆಂಬ ಆರೋಪ ರೈತರಿಂದ ಕೇಳಿಬಂದಿದೆ. “ರೈತರ ನೋವನ್ನು ಮರೆತು ಅಧಿಕಾರಿಗಳ ಅಭಿನಂದನೆಗಾಗಿ ಬೆಂಗಳೂರಿಗೆ ತೆರಳಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ,” ಎಂದು ಸ್ಥಳೀಯರು ಟೀಕಿಸಿದರು.

Related Articles

Leave a Reply

Your email address will not be published. Required fields are marked *

Back to top button