ಅಕ್ಷಯ ತೃತೀಯದ ಅಂಗವಾಗಿ ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ
ಮೌನ ಮುರಿದು ಮಕ್ಕಳ ಭವಿಷ್ಯ ರಕ್ಷಿಸೋಣ

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಶ್ರೀ ಮಹಿಳಾ ಮಹಾವಿದ್ಯಾಲಯದಲ್ಲಿ ಅಕ್ಷಯ ತೃತೀಯದ ಅಂಗವಾಗಿ ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮವನ್ನು ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ, ದೇಶಾದ್ಯಂತ ಬಾಲ್ಯ ವಿವಾಹ ನಿರ್ಮೂಲನೆಗೆ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯವು ಈ ವಿಷಯದಲ್ಲಿ ಮಾದರಿಯಾಗಿದ್ದು, ಸುಪ್ರೀಂ ಕೋರ್ಟ್ ಸಹ ರಾಜ್ಯದ ಕ್ರಮಗಳನ್ನು ರಾಷ್ಟ್ರಮಟ್ಟದಲ್ಲಿ ಅನುಸರಿಸಲು ಶಿಫಾರಸು ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಬಾಲ್ಯ ವಿವಾಹದಲ್ಲಿ ಭಾಗಿಯಾಗುವವರಿಗೆ ಕಠಿಣ ಶಿಕ್ಷೆಗಳಿದ್ದು, ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು. ಪೋಷಕರು, ಸಂಬಂಧಿಕರು, ಪುರೋಹಿತರು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಎಲ್ಲರೂ ಶಿಕ್ಷೆಗೆ ಒಳಗಾಗಬಹುದು ಎಂದು ತಿಳಿಸಿದರು. ಬಾಲ್ಯ ವಿವಾಹದ ಮಾಹಿತಿ ದೊರೆತಲ್ಲಿ ತಕ್ಷಣವೇ 1098 ಅಥವಾ 112ಕ್ಕೆ ಕರೆಮಾಡುವಂತೆ ಅವರು ಮನವಿ ಮಾಡಿದರು. ಈ ವೇಳೆ ಎಲ್ಲರಿಗೂ ಬಾಲ್ಯ ವಿವಾಹ ತಡೆಗಟ್ಟುವ ಪ್ರಮಾಣ ವಚನ ಬೋಧಿಸಲಾಯಿತು.
ಮಂಜುಳಾ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಬಾಲ್ಯ ವಿವಾಹಗಳ ಸಮಸ್ಯೆ ಗಂಭೀರವಾಗಿದ್ದು, ಅನೇಕ ಹೆಣ್ಣುಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿರುವುದಾಗಿ ತಿಳಿಸಿದರು. ಶಿಕ್ಷಣವೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಅವರು ಅಭಿಪ್ರಾಯಪಟ್ಟರು.
ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ್ ಮಾತನಾಡಿ, ಬಾಲಕಿಯರನ್ನು ಬಾಲ್ಯ ವಿವಾಹದಿಂದ ರಕ್ಷಿಸಿದ ಅನುಭವ ಹಂಚಿಕೊಂಡು, ಸಮಾಜದ ಪ್ರತಿಯೊಬ್ಬರೂ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದಲ್ಲಿ ಕಲಾ ವಿಭಾಗದಲ್ಲಿ 99.6% ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಸೃಷ್ಟಿಯನ್ನು ಸನ್ಮಾನಿಸಲಾಯಿತು. “ಶಿಕ್ಷಣವೇ ಬಾಲ್ಯ ವಿವಾಹಕ್ಕೆ ಶಾಶ್ವತ ಪರಿಹಾರ” ಎಂದು ಹೇಳಿದ ಅವರು, ಉನ್ನತ ಗುರಿ ಸಾಧನೆಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಚಾರ್ಯೆ ವೀಣಾ ಹೆಚ್. ವಹಿಸಿದ್ದರು. ಪ್ರಾಚಾರ್ಯ ಡಾ. ಮೋಹನರಾಜ ಪತ್ತಾರ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಬಸವರಾಜ ಸಾಂಸ್ಥೆ ಸ್ವಾಗತ ಕೋರಿದರು.
“ಬಾಲ್ಯ ವಿವಾಹವನ್ನು ನೋಡಿ ಮೌನವಾಗಬೇಡಿ – ಮಕ್ಕಳ ಭವಿಷ್ಯವನ್ನು ರಕ್ಷಿಸೋಣ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.




