ತಿಪ್ಪಣ್ಣಪ್ಪ ಕಮಕನೂರಿಗೆ ಸಚಿವ ಸ್ಥಾನ ಕೊಡಿ! | ಕಾಂಗ್ರೆಸ್ ನಾಯಕರಿಗೆ ಜಮಾದಾರ ಒತ್ತಾಯ
MLC ಸ್ಥಾನ ಮುಂದುವರಿಸಿ, ಸಚಿವರನ್ನಾಗಿ ಮಾಡಿ | ಕಲಬುರಗಿಯಿಂದ ಬಲವಾದ ಆಗ್ರಹ

ಕಲಬುರಗಿ: ಕೋಲಿ,ಕಬ್ಬಲಿಗ ಹಿಂದುಳಿದ ಸಮಾಜದ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ತಿಪ್ಪಣ್ಣಪ್ಪ ಕಮಕನೂರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಪೂರ್ಣಾವಧಿಗೆ ಮುಂದುವರಿಸಿ, ಸೂಕ್ತ ಸಚಿವ ಸ್ಥಾನ ನೀಡಬೇಕು ಎಂದು ಜೈ ಕರುನಾಡು ಜನಪರ ಸಮಿತಿ ಆಗ್ರಹಿಸಿದೆ.
ಸಮಿತಿಯ ರಾಜ್ಯಾಧ್ಯಕ್ಷ ಸಿದ್ದು (ಗೌತಮ) ಹೆಚ್. ಜಮಾದಾರ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಮನವಿಯಲ್ಲಿ, ತಿಪ್ಪಣ್ಣಪ್ಪ ಕಮಕನೂರ ಅವರು 2019ರಲ್ಲಿ ಒಂದು ವರ್ಷದ ಅವಧಿಗೆ ಹಾಗೂ 2023ರಲ್ಲಿ ಮೂರು ವರ್ಷದ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಅವರ ಪ್ರಸ್ತುತ ಅವಧಿ ಇದೇ ಜೂನ್ 30ರಂದು ಅಂತ್ಯಗೊಳ್ಳಲಿದೆ ಎಂದು ಉಲ್ಲೇಖಿಸಲಾಗಿದೆ. ಅವರಿಗೆ ಪೂರ್ಣಾವಧಿ ಅವಕಾಶ ದೊರಕದಿರುವುದು ವಿಷಾದನೀಯ ಸಂಗತಿ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಅಭಿವೃದ್ಧಿಗಾಗಿ ಕಮಕನೂರ ಅವರು ನಿರಂತರ ಹೋರಾಟ ನಡೆಸಿದ್ದು, ಸದನದಲ್ಲಿಯೂ ಜನಪರ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪಕ್ಷದ ಸಂಘಟನಾ ಬಲವರ್ಧನೆ ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಪಕ್ಷದತ್ತ ಸೆಳೆಯುವಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದಾರೆ ಎಂದು ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಿಪ್ಪಣ್ಣಪ್ಪ ಕಮಕನೂರ ಅವರನ್ನು ಪೂರ್ಣಾವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಮುಂದುವರಿಸುವುದರ ಜೊತೆಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಇದೇ ವೇಳೆ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಅಗತ್ಯವಿದ್ದು, ಸಮಾಜದ ಹಿತದೃಷ್ಟಿಯಿಂದ ಲಕ್ಷಪ್ಪ ಜಮಾದಾರ ಅವರನ್ನು ನೇಮಕ ಮಾಡಬೇಕು ಎಂಬ ಮನವಿಯನ್ನೂ ಸಮಿತಿ ಸಲ್ಲಿಸಿದೆ.
ಇಂತಹ ನಿರ್ಧಾರಗಳು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮತ್ತಷ್ಟು ಬಲ ನೀಡಲಿವೆ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.




