ಕಲಬುರಗಿಜಿಲ್ಲಾಸುದ್ದಿ

ಸಂತ ಸೇವಾಲಾಲ ಮಹಾರಾಜ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಅರುಣಕುಮಾರ ಪಾಟೀಲ

ಅಫಜಲಪುರ: ಸಂತ ಸೇವಾಲಾಲ ಮಹಾರಾಜರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ಅದರಿಂದ ಬದುಕು ಅರ್ಥಪೂರ್ಣವಾಗಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ ಹೇಳಿದರು.

ಪಟ್ಟಣದ ತಹಸೀಲ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾದ ಸಂತ ಶ್ರೀ ಸೇವಾಲಾಲ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಜಾರಾ ಸಮುದಾಯದವರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಕಲ್ಯಾಣ ಯೋಜನೆಗಳು, ಸ್ವಯಂ ಉದ್ಯೋಗ ಯೋಜನೆಗಳಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.

ಸಮುದಾಯದ ಒಗ್ಗಟ್ಟು ಮತ್ತು ಶಿಸ್ತುಬದ್ಧ ಸಂಘಟನೆ ಸಮಾಜದ ಪ್ರಗತಿಗೆ ಮುಖ್ಯ ಆಧಾರವಾಗಿದ್ದು, ಯುವಕರು ದುಷ್ಪ್ರವೃತ್ತಿಗಳಿಂದ ದೂರವಿದ್ದು ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಬಂಜಾರಾ ಸಮುದಾಯಕ್ಕೆ ವೈಭವಶಾಲಿ ಇತಿಹಾಸ ಹಾಗೂ ಸಮೃದ್ಧ ಸಾಂಸ್ಕೃತಿಕ ಪರಂಪರೆ ಇದೆ. ಸಂತ ಸೇವಾಲಾಲ ಮಹಾರಾಜರು ಸಮಾಜ ಸುಧಾರಣೆಗೆ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿದ ಮಹನೀಯರು. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜದಲ್ಲಿ ಸಹಬಾಳ್ವೆ, ಪರಸ್ಪರ ಗೌರವ ಹಾಗೂ ಸಹಕಾರದ ಮನೋಭಾವ ಬೆಳೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಹಸೀಲ್ದಾರ ಸಂಜೀವಕುಮಾರ ದಾಸರ ಮಾತನಾಡಿ, ಸಂತ ಶ್ರೀ ಸೇವಾಲಾಲ ಮಹಾರಾಜರ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ನ್ಯಾಯ, ಸಹಬಾಳ್ವೆ ಹಾಗೂ ಸರ್ವರ ಕಲ್ಯಾಣಕ್ಕಾಗಿ ಶ್ರಮಿಸುವ ಸಂಕಲ್ಪವನ್ನು ನಾವು ಎಲ್ಲರೂ ಕೈಗೊಳ್ಳೋಣ ಎಂದರು. ಸಮಾಜದ ಹಿಂದುಳಿದ ವರ್ಗಗಳ ಉನ್ನತಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಶ್ರೀ ನವ ಶಕ್ತಿ ಪುಣ್ಯಾಶ್ರಮ ಶಕ್ತಿಪೀಠ ಚೌಡಾಪೂರದ ಪೂಜ್ಯ ಶ್ರೀ ಮುರಾಹರಿ ಮಹಾರಾಜರು, ಲಾಡ ಚಿಂಚೋಳಿ ಶ್ರೀ ಸುನೀಲ ಮಹಾರಾಜರು ಹಾಗೂ ಶ್ರೀ ಶಂಕರ ಪೂಜಾರಿ ಸಾನಿಧ್ಯ ವಹಿಸಿ ಆಶೀರ್ವಾಚನ ನೀಡಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶಗಳ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಅವರು ಉಪದೇಶಿಸಿದರು.

ಕಾರ್ಯಕ್ರಮದಲ್ಲಿ ಬಂಜಾರಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅಪ್ಪು.ಬಿ.ರಾಠೋಡ, ಬಂಜಾರಾ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ನಾಥರಾಮ.ಎಲ್.ರಾಠೋಡ, ಜಿಲ್ಲಾ ಉಪಾಧ್ಯಕ್ಷ ರಾಕೇಶ ಟಿ.ರಾಠೋಡ, ಶಂಕರ ದಾಮುಲು ರಾಠೋಡ, ಸುಭಾಷ, ಸಿ. ರಾಠೋಡ, ತಾರು.ಎಚ್. ಜಾಧವ, ಶ್ರೀಧರ.ಡಿ. ರಾಠೋಡ, ವಿನೋದ ಎಂ. ರಾಠೋಡ, ಪ್ರೀತಮ್ ರಾಠೋಡ, ಮೇಘು.ಆರ್.ಚವ್ಹಾಣ, ವಿನೋದ ಚವ್ಹಾಣ, ವಿಜಯಕುಮಾರ ಎಂ.ರಾಠೋಡ, ಸುನೀಲ ರಾಠೋಡ, ರಾಜಕುಮಾರ ಪವಾರ, ಉಪನ್ಯಾಸಕ ಸುರೇಶ ಎಸ್.ರಾಠೋಡ, ರಾಜಕುಮಾರ ಚವ್ಹಾಣ, ಕವಿತಾ ರಾಠೋಡ, ಕಸಾಪ ಅಧ್ಯಕ್ಷ ಪ್ರಭಾವತಿ ಮೇತ್ರೆ, ರಾಘವೇಂದ್ರ ರಾಠೋಡ, ಪುನ್ನು .ಡಿ. ಪವಾರ, ಕೇಶು ಆರ್.ಜಾಧವ್, ಶಿಕ್ಷಕರಾದ ಲಕ್ಷ್ಮಣ ಎಲ್.ಪವಾರ, ಪ್ರಮೋದ ಎಂ.ಜಾಧವ, ಕೃಷ್ಣಾ ಜಗನು ರಾಠೋಡ, ಸಮಾಜ ಕಲ್ಯಾಣ ಇಲಾಖೆ ಅಶೋಕ ನಾಯಕ ಸೇರಿದಂತೆ ಬಂಜಾರಾ ಸಮುದಾಯದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಭಜನ ಮಂಡಳಿ ಸದಸ್ಯರು, ಹಿರಿಯರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಸೀಲ ಕಚೇರಿವರೆಗೆ ಸಂತ ಶ್ರೀ ಸೇವಾಲಾಲ ಮಹಾರಾಜರ ಭಾವಚಿತ್ರದ ಅದ್ದೂರಿ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಭಜನ ಮಂಡಳಿಯವರು ಭಕ್ತಿಗೀತೆಗಳನ್ನು ಹಾಡಿ ಭಕ್ತಿಭಾವ ಮೂಡಿಸಿದರು. ಜಯಂತೋತ್ಸವಕ್ಕೆ ಮೆರುಗು ತಂದವು.ಕಾರ್ಯಕ್ರಮವನ್ನು ಶಿಸ್ತಿನಿಂದ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button