ಕಲಬುರಗಿಜಿಲ್ಲಾಸುದ್ದಿ

ಮಲ್ಲಾಬಾದ ಏತ ನೀರಾವರಿ ಯೋಜನೆಗೆ ಚುರುಕು: ವಾರದೊಳಗೆ ಟೆಂಡರ್ ಒಪ್ಪಂದದ ಭರವಸೆ – ವಿಳಂಬವಾದರೆ ಹೋರಾಟದ ಎಚ್ಚರಿಕೆ

ಕಲಬುರಗಿ: ಮಲ್ಲಾಬಾದ ಏತ ನೀರಾವರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುವ ಕುರಿತು Karnataka Neeravari Nigam Limited (ಕೆಬಿಜೆಎನ್‌ಎಲ್) ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಯಿತು.

ಯೋಜನೆ ದೀರ್ಘಕಾಲದಿಂದ ವಿಳಂಬವಾಗುತ್ತಿರುವ ಹಿನ್ನೆಲೆ ರೈತರು ಹಾಗೂ ಸ್ಥಳೀಯರ ಆತಂಕವನ್ನು ನಿಯೋಗ ಅಧಿಕಾರಿಗಳ ಗಮನಕ್ಕೆ ತಂದಿತು.ಸಭೆಯಲ್ಲಿ ಅಧಿಕಾರಿಗಳು ಪ್ರತಿಕ್ರಿಯಿಸಿ, ಮಲ್ಲಾಬಾದ ಏತ ನೀರಾವರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಒಂದು ವಾರದೊಳಗೆ ಟೆಂಡರ್ ಒಪ್ಪಂದ ಮಾಡಿಕೊಳ್ಳ ಲಾಗುವುದು ಎಂದು ಭರವಸೆ ನೀಡಿದರು. ಯೋಜನೆ ಜಾರಿಯಾದರೆ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ವಿಸ್ತರಿಸಿ, ಕೃಷಿ ಉತ್ಪಾದನೆಗೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದರು.

ಆದರೆ, ಈಗಾಗಲೇ ಹಲವು ಬಾರಿ ಭರವಸೆ ನೀಡಿದರೂ ಕಾಮಗಾರಿ ಆರಂಭವಾಗದಿರುವುದರಿಂದ ಜನರಲ್ಲಿ ಅನುಮಾನ ಮೂಡಿದೆ ಎಂದು ನಿಯೋಗದ ಸದಸ್ಯರು ಸ್ಪಷ್ಟಪಡಿಸಿದರು. ಈ ಬಾರಿ ನೀಡಿರುವ ಭರವಸೆಯಂತೆ ವಾರದೊಳಗೆ ಒಪ್ಪಂದ ಮಾಡಿಕೊಂಡು ತಕ್ಷಣ ಕಾಮಗಾರಿ ಆರಂಭಿಸದಿದ್ದರೆ ಹೋರಾಟದ ಮಾರ್ಗ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಲ್ಲಾಬಾದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮಳೆಆಧಾರಿತ ಕೃಷಿಗೆ ಅವಲಂಬಿತರಾಗಿದ್ದು, ನೀರಾವರಿ ಯೋಜನೆ ಜಾರಿಯಾದರೆ ಸಾವಿರಾರು ಏಕರೆ ಪ್ರದೇಶಕ್ಕೆ ನೀರು ಪೂರೈಕೆ ಸಾಧ್ಯವಾಗಲಿದೆ. ಇದರಿಂದ ರೈತರ ಆದಾಯ ಹೆಚ್ಚಳವಾಗುವುದರ ಜೊತೆಗೆ ಗ್ರಾಮೀಣ ಆರ್ಥಿಕತೆಗೆ ಬಲ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ನಿಯೋಗದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ ಮಹೇಶ ಕುಮಾರ ರಾಠೋಡ, ಆದರ್ಶ ಗ್ರಾಮ ಸಮಿತಿ, ಯಾಳವಾರ ಅಧ್ಯಕ್ಷ ಇಬ್ರಾಹಿಂ ಪಟೇಲ ಯಾಳವಾರ, ಯಾಳವಾರ ಯುವ ರೈತ ಶ್ರೀಶೈಲ ಪೂಜಾರಿ ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button