ಕಲಬುರಗಿಜಿಲ್ಲಾಸುದ್ದಿ

‘ರಾಷ್ಟ್ರಕೂಟ’ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪನೆಗೆ ಸರಕಾರಕ್ಕೆ ಮಹಿಪಾಲರೆಡ್ಡಿ ಮುನ್ನೂರ್ ಮನವಿ

ಕಲಬುರಗಿ: ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ಕವಿರಾಜಮಾರ್ಗ ನೀಡಿದ ನೃಪತುಂಗ ಅಮೋಘವರ್ಷ ಆಡಳಿತದ ರಾಷ್ಟ್ರಕೂಟರ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸಬೇಕು ಎಂದು ಹಿರಿಯ ಸಾಹಿತಿ, ಪತ್ರಕರ್ತ, ನಟ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ (ಸೇಡಂ) ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಕನ್ನಡಕ್ಕೆ ಮೇರು ಕೀರ್ತಿ ತಂದ ಶ್ರೀವಿಜಯನ ಕವಿರಾಜಮಾರ್ಗ ಕನ್ನಡ ಸಾಹಿತ್ಯ ಹಾಗೂ ಇತಿಹಾಸ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ತಿಳಿಸಿದ್ದಾರೆ. ಕನ್ನಡವನ್ನು ವಿಶ್ವಮಾನ್ಯತೆ ದರ್ಜೆಗೆ ಏರಿಸಿದ ಹಿನ್ನೆಲೆ ರಾಷ್ಟ್ರಕೂಟ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸಿದರೆ ಕನ್ನಡದ ಸಾರಸ್ವತ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾವ್ಯ ಕ್ಷೇತ್ರಕ್ಕೆ ರಾಜಮಾರ್ಗ ಹಾಕಿಕೊಟ್ಟ ರಾಷ್ಟ್ರಕೂಟರ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿ, ಸಾಹಿತ್ಯ ಮತ್ತು ಇತಿಹಾಸ ಸಂಬಂಧಿತ ವಿವಿಧ ಕಾರ್ಯಕ್ರಮಗಳನ್ನು ರೂಪಿಸಬಹುದು. ಜೊತೆಗೆ ಕನ್ನಡ ಸಾಹಿತ್ಯದ ಮೊದಲ ಲಾಕ್ಷಣಿಕ ಗ್ರಂಥ ಎಂಬ ಗೌರವದ ಹಿನ್ನೆಲೆಯಲ್ಲಿ ರಾಷ್ಟ್ರಕೂಟ ಹೆಸರಿನಲ್ಲಿ ವಿಶೇಷ ಪ್ರಶಸ್ತಿಯನ್ನು ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದಲ್ಲದೆ ರಾಷ್ಟ್ರಕೂಟರ ಆಡಳಿತದಲ್ಲಿ ರಾಜಧಾನಿಯಾಗಿದ್ದ ಮಳಖೇಡ (ಮಾನ್ಯಖೇಟ) ಪಟ್ಟಣವನ್ನು ವಿಶ್ವಮಾನ್ಯತೆಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮಹಿಪಾಲರೆಡ್ಡಿ ಮುನ್ನೂರ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button